ಮದುವೆ ಮನೆಯಲ್ಲಿ ಚಿನ್ನದ ಸರ ಎಗರಿಸಿದ ಆರೋಪಿಯ ಬಂಧನ
ಕಾರ್ಕಳ: ಮದುವೆ ಮನೆಯಲ್ಲಿಯೇ ಚಿನ್ನದ ಸರವನ್ನು ಎಗರಿಸಿರುವ ಘಟನೆ ಕಾರ್ಕಳದ ಪಳ್ಳಿ ಗ್ರಾಮದ ಕೃಷ್ಣ ಹಾಲ್ ನಲ್ಲಿ ನಡೆದಿದೆ.
ಪ್ರಕರಣ ಸಂಬಂಧ ಆರೋಪಿಯನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಕಾರ್ಕಳ ದಿಡಿಂಬೊಟ್ಟು ನಿವಾಸಿ ಸುರೇಶ್ ಪೂಜಾರಿ ಎಂದು ಗುರುತಿಸಲಾಗಿದೆ.
ಬೆಳ್ತಂಗಡಿ ಅಚ್ಚಿನಡ್ಕ ನಿವಾಸಿ ಭವಾನಿ ಎಂಬುವವರು ಸಂಬಂಧಿಕರ ಮದುವೆ ಸಮಾರಂಭಕ್ಕೆಂದು ಕಾರ್ಕಳದ ಪಳ್ಳಿ ಗ್ರಾಮದ ಕೃಷ್ಣ ಹಾಲ್ ಗೆ ಬಂದಿದ್ದರು. ವಧು-ವರರಿಗೆ ಶುಭಹಾರೈಸುವ ವೇಳೆಯಲ್ಲಿ ತಮ್ಮ ವ್ಯಾನಿಟಿ ಬ್ಯಾಗ್ ಅನ್ನು ಮದುಮಗನ ಡ್ರೆಸ್ಸಿಂಗ್ ರೂಂ’ನಲ್ಲಿರಿಸಿದ್ದರು. ಮದುಮಕ್ಕಳಿಗೆ ಶುಭ ಹಾರೈಸಿ ವಾಪಸ್ ರೂಂ ತೆರಳಿದಾಗ ವ್ಯಾನಿಟ್ ಬ್ಯಾಗ್ ಕಳವಾಗಿದ್ದು ಗಮನಕ್ಕೆ ಬಂದಿತ್ತು.
ಬ್ಯಾಗ್ ನಲ್ಲಿ 52 ಸಾವಿರ ಮೌಲ್ಯದ 10 ಗ್ರಾಂ ತೂಕದ ಚಿನ್ನದ ಸರ, 6 ಸಾವಿರ ಮೌಲ್ಯದ ಮೊಬೈಲ್ ಫೋನ್ ಹಾಗೂ 1,200/- ನಗದು ಹಣವೂ ಕಳವಾಗಿದೆ ಎಂದು ಕಾರ್ಕಳ ಪೊಲೀಸ್ ಠಾಣೆಗೆ ದೂರು ನೀಡಿದ್ದರು.





