April 3, 2025

ಬ್ಯಾಂಕ್‌ ಖಾತೆಗೆ ಪಾನ್‌ ಲಿಂಕ್‌:
ನಕಲಿ ಸಂದೇಶ ನಂಬಿ ದುಡ್ಡು ಕಳೆದುಕೊಂಡ ತೆಕ್ಕಾರಿನ ರಿಕ್ಷಾ ಚಾಲಕ

0

ಉಪ್ಪಿನಂಗಡಿ: ನಿಮ್ಮ ಉಳಿತಾಯ ಖಾತೆಗೆ ಪಾನ್‌ ಕಾರ್ಡ್‌ ನಂಬರ್‌ ಲಿಂಕ್‌ ಮಾಡಿ. ಇಲ್ಲವಾದರೆ ಖಾತೆ ಬ್ಲಾಕ್‌ ಮಾಡಲಾಗುವುದು. ಬ್ಯಾಂಕ್‌ ಖಾತೆಯ ವೆಬ್‌ಸೈಟ್‌ ಲಿಂಕ್‌ನಲ್ಲಿ ಸುಲಭವಾಗಿ ಪಾನ್‌ ನಂಬರ್‌ ಅನ್ನು ನೀವಾಗಿಯೇ ದಾಖಲಿಸಬಹುದು ಎನ್ನುವ ಸಂದೇಶವನ್ನು ನಂಬಿ ವಂಚಕರು ಕಳುಹಿಸಿದ್ದ ನಕಲಿ ವೆಬ್‌ಸೈಟ್‌ನಲ್ಲಿ ಬ್ಯಾಂಕ್‌ ಖಾತೆಯ ವಿವರ ದಾಖಲಿಸುತ್ತಿದ್ದಂತೆಯೇ ಖಾತೆಯಲ್ಲಿದ್ದ 55,620 ರೂ. ಹಣ ವಿದ್‌ ಡ್ರಾ ಆದ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.

ಬೆಳ್ತಂಗಡಿ ತಾಲೂಕು ತೆಕ್ಕಾರು ಗ್ರಾಮದ ಕೊಡಂಗೆ ಮನೆ ನಿವಾಸಿ ಆಟೋ ರಿಕ್ಷಾಚಾಲಕ ಅಬ್ದುಲ್‌ ರಹಿಮಾನ್‌ ಹಣ ಕಳೆದುಕೊಂಡು ಮೋಸ ಹೋದವರು. ಅವರ ಮೊಬೈಲ್‌ಗೆ ಭಾರತೀಯ ಸ್ಟೇಟ್‌ ಬ್ಯಾಂಕ್‌ನಿಂದ ಕಳುಹಿಸಲಾಗಿದೆ ಎಂದು ಬಿಂಬಿಸಲಾದ ಸಂದೇಶದಲ್ಲಿ ನಿಮ್ಮ ಉಳಿತಾಯ ಖಾತೆಗೆ ಕೂಡಲೇ ಪಾನ್‌ ನಂಬರ್‌ ಅನ್ನು ಜೋಡಿಸಿ. ಇಲ್ಲವಾದರೆ ಖಾತೆಯನ್ನು ಬ್ಲಾಕ್‌ ಮಾಡಲಾಗುವುದು. ಪಾನ್‌ ನಂಬರ್‌ ಅನ್ನು ಖಾತೆಗೆ ಜೋಡಿಸಲು ನಮ್ಮ ವೆಬ್‌ಸೈಟ್‌ ಲಿಂಕ್‌ ಅನ್ನು ಸಂಪರ್ಕಿಸಬಹುದು ಎಂದು ತಿಳಿಸಲಾಗಿತ್ತು.

ವೆಬ್‌ಸೈಟ್‌ ಲಿಂಕ್‌ನಲ್ಲಿ ಎಸ್‌ಬಿಐ ಎನ್ನುವ ಹೆಸರಿದ್ದ ಕಾರಣ ಇದು ಬ್ಯಾಂಕಿನ ನಿಜವಾದ ವೆಬ್‌ಸೈಟ್‌ ಇರಬಹುದೆಂದು ನಂಬಿದ ರಹಿಮಾನ್‌ ಅವರು ಲಿಂಕ್‌ ಅನ್ನು ತೆರೆದು ಅದರಲ್ಲಿ ಬ್ಯಾಂಕ್‌ ಖಾತೆಗಳ ವಿವರಗಳನ್ನು ದಾಖಲಿಸಿದ್ದರು. ಆ ಕೂಡಲೇ ಖಾತೆಯಲ್ಲಿದ್ದ 55,620 ರೂ. ನಗದು ಕಾಣೆಯಾಗಿದೆ. ಒಟಿಪಿ ನೀಡಿದರೆ ಮಾತ್ರ ಹಣ ವರ್ಗಾವಣೆಗೊಳ್ಳುವುದೆಂದು ಭಾವಿಸಿ ಬ್ಯಾಂಕ್‌ ಖಾತೆಯ ವಿವರಗಳನ್ನು ನಿಟ್ನೇತಿಯಿಂದ ದಾಖಲಿಸುತ್ತಾ ಹೋದ ರಹಿಮಾನ್‌ ಅವರಿಗೆ ತನ್ನ ಖಾತೆಯಿಂದ ಹಣ ಎಗರಿಸಲ್ಪಟ್ಟದ್ದು ಗೊತ್ತಾಗಿ ಕಂಗಾಲಾಗಿದ್ದಾರೆ. ಈ ಬಗ್ಗೆ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

 

 

Leave a Reply

Your email address will not be published. Required fields are marked *

You may have missed

error: Content is protected !!