ರಾವೂರ್: ಕೆಲಸಕ್ಕೆ ಹೋಗುತ್ತಿದ್ದಾಗ ಅಪಘಾತ, ಬೈಕ್ ಸವಾರ ಮೃತ್ಯು
ವಾಡಿ: ಕೆಲಸಕ್ಕೆಂದು ಸಿಮೆಂಟ್ ಕಾರ್ಖಾನೆಗೆ ಹೋಗುತ್ತಿದ್ದ ಕಾರ್ಮಿಕನೋರ್ವ ಅಪಘಾತಕ್ಕೀಡಾಗಿ ಸ್ಥಳದಲ್ಲೇ ಮೃತಪಟ್ಟ ಘಟನೆ ಚಿತ್ತಾಪೂರ ತಾಲೂಕಿನ ರಾವೂರ ಗ್ರಾಮದ ರಾಷ್ಟ್ರೀಯ ಹೆದ್ದಾರಿ -150 ರಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದೆ.
ಶಹಾಬಾದ ತಾಲೂಕಿನ ಗೋಳಾ ಗ್ರಾಮದ ನಿವಾಸಿ ಮಹ್ಮದ್ ವಸೀಮ್ (25) ಮೃತಪಟ್ಟ ಕಾರ್ಮಿಕ.
ಗೋಳಾ ಗ್ರಾಮದಿಂದ ರಾವೂರ ಮಾರ್ಗವಾಗಿ ಬೈಕ್ ಮೇಲೆ ಚಿತ್ತಾಪೂರ ಸಮೀಪದ ಓರಿಯಂಟ್ ಸಿಮೆಂಟ್ ಕಾರ್ಖಾನೆಗೆ ಹೋಗುತ್ತಿದ್ದ ವೇಳೆ ಎದುರಿಗೆ ಬಂದ ಟಂಟಂ ವಾಹನ ಢಿಕ್ಕಿ ಹೊಡೆದಿದೆ. ಪರಿಣಾಮ ತಲೆಗೆ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈತನ ಜತೆಗೆ ಬರುತ್ತಿದ್ದ ಹಿಂಬದಿ ಸವಾರನಿಗೆ ಗಾಯವಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ತೀವ್ರತೆಗೆ ಟಂಟಂ ವಾಹನ ಗಾಜು ಮತ್ತು ಬೈಕ್ ನ ಮುಖಭಾಗ ಝಕಂಗೊಂಡಿದೆ. ವಾಡಿ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.




