ಮುಜಾಫರ್‌ಪುರದಲ್ಲಿ ನಕಲಿ ಮದ್ಯ ಸೇವಿಸಿ ಐವರು ಮೃತ್ಯು, ಹಲವರು ಆಸ್ಪತ್ರೆಗೆ ದಾಖಲು

ಬಿಹಾರ: ಮುಜಾಫರ್‌ಪುರ ಜಿಲ್ಲೆಯಲ್ಲಿ ಐವರು ಮದ್ಯ ಸೇವಿಸಿ ಸಾವನ್ನಪ್ಪಿದ್ದು, ಹಲವರು ಅಸ್ವಸ್ಥರಾದ ಘಟನೆ ನಡೆದಿದೆ.
ಗುರುವಾರ ರಾತ್ರಿ ಸರಯ್ಯ ಪೊಲೀಸ್ ಠಾಣೆ ವ್ಯಾಪ್ತಿಯ ರುಪೌಲಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಇಂದು ಬೆಳಗ್ಗೆ ಆಸ್ಪತ್ರೆಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಐದನೇ ವ್ಯಕ್ತಿಯ ಶವ ಆತನ ಮನೆಯ ಬಳಿ ಪತ್ತೆಯಾಗಿದೆ.
ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪಂಚಾಯತ್ ಸಮಿತಿಯ ಸದಸ್ಯ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಉತ್ತರ ಬಿಹಾರದಲ್ಲಿ ಕಳೆದ ಒಂದು ವಾರದಲ್ಲಿ ಶಂಕಿತ ನಕಲಿ ಮದ್ಯ ಸೇವಿಸಿ ಸಾವನ್ನಪ್ಪಿದ ಎರಡನೇ ಘಟನೆ ಇದಾಗಿದೆ.
ಐವರು ವಿಷಕಾರಿ ಪದಾರ್ಥ ಸೇವಿಸಿ ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಮುಜಾಫರ್‌ಪುರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಜಯಂತ್ ಕಾಂತ್ ಹೇಳಿದ್ದಾರೆ. ಮರಣೋತ್ತರ ಪರೀಕ್ಷೆಯಿಂದ ಸಾವಿಗೆ ನಿಖರ ಕಾರಣ ತಿಳಿಯಲಿದೆ.
ಘಟನೆಯಲ್ಲಿ ಮೃತಪಟ್ಟವರ ಮನೆಯಿಂದ ಖಾಲಿ ಮದ್ಯ ಮತ್ತು ಮೀಥೈಲ್ ಮದ್ಯದ ಬಾಟಲಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಎಸ್‌ಎಸ್‌ಪಿ ತಿಳಿಸಿದ್ದಾರೆ. ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶೋಧ ನಡೆಸಲಾಗುತ್ತಿದ್ದು, ಫೋರೆನ್ಸಿಕ್ ತಜ್ಞರ ತಂಡವನ್ನು ಪೊಲೀಸರು ತೊಡಗಿಸಿಕೊಂಡಿದ್ದಾರೆ.
ಘಟನೆಯಲ್ಲಿ ಮೃತರೊಬ್ಬರ ಮನೆಯಲ್ಲಿ ಗ್ರಾಮಸ್ಥರ ಗುಂಪು ಮದ್ಯದ ಪಾರ್ಟಿ ಆಯೋಜಿಸಿತ್ತು ಎಂದು ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮದ್ಯ ಸೇವಿಸಿದ ಐವರ ಆರೋಗ್ಯ ಹದಗೆಟ್ಟಿದ್ದು, ನಾಲ್ವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ. ಅದರ ಸಮೀಪವೇ ಮನೆಯ ಮಾಲೀಕರ ಶವ ಪತ್ತೆಯಾಗಿದೆ.
ಪಾರ್ಟಿಯಲ್ಲಿ ಭಾಗವಹಿಸಿದ್ದ ಇನ್ನೂ ಕೆಲವು ಗ್ರಾಮಸ್ಥರು ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ ಎಂಬ ವರದಿಗಳಿದ್ದು, ಪೊಲೀಸರು ಅವರ ವಿವರಗಳನ್ನು ಸಂಗ್ರಹಿಸುತ್ತಿದ್ದಾರೆ ಎಂದು ಅವರು ಹೇಳಿದರು.
ನಿತೀಶ್ ಕುಮಾರ್ ಸರ್ಕಾರವು ಏಪ್ರಿಲ್ 5, 2016 ರಂದು ರಾಜ್ಯದಲ್ಲಿ ಮದ್ಯದ ತಯಾರಿಕೆ, ವ್ಯಾಪಾರ, ಸಂಗ್ರಹಣೆ, ಸಾಗಣೆ, ಮಾರಾಟ ಮತ್ತು ಸೇವನೆಯನ್ನು ನಿಷೇಧಿಸಿತ್ತು.