ಹಿಂದೂ, ಮುಸ್ಲಿಂ ಭೇದವಿಲ್ಲದೆ ಮಾಂಸ ಖರೀದಿಗೆ ಮುಗಿಬಿದ್ದ ಗ್ರಾಹಕರು
ತುಮಕೂರು: ರಾಜ್ಯದಲ್ಲಿ ಹಲಾಲ್ ಕಟ್ ಜಟ್ಕಾ ಕಟ್ ವಿವಾದ ನಡೆಯುತ್ತಿದ್ದರೆ, ಇತ್ತ ಹೊಸ ತೊಡಕಿಗೆ ಜನರು ಗುಡ್ಡೆ ಮಾಂಸ ಖರೀದಿಗೆ ಮುಗಿ ಬಿದ್ದಿದ್ದು, ಹೊಸ ತೊಡಕಿನ ದಿನ ಹಲಾಲ್ ಕಟ್ ವಿವಾದ ಪರಿಣಾಮ ಬೀರಲಿಲ್ಲ.
ನಗರದಲ್ಲಿ ಹಿಂದೂ ಮುಸ್ಲಿಂ ಎನ್ನುವ ಬೇಧವಿಲ್ಲದೆ, ಮಾಂಸ ಖರೀದಿಗೆ ಮುಗಿಬಿದ್ದಿದ್ದರು. ಜಗನ್ನಾಥರ, ಸಿರಾಗೇಟ್ ಸೇರಿದಂತೆ ವಿವಿಧೆಡೆ ದೊರೆಯುವ ಗುಡ್ಡೆ ಮಾಂಸ ಖರೀದಿಗೆ ಗ್ರಾಹಕರು ಹೆಚ್ಚಿನ ಒತ್ತು ನೀಡಿರುವುದು ಕಂಡು ಬಂದಿದೆ.
ನಗರದಲ್ಲಿ 700 ರೂಪಾಯಿಗೆ ಉತ್ತಮ ಗುಣಮಟ್ಟದ ಗುಡ್ಡೆ ಮಾಂಸ ಸಿಗುತ್ತಿದ್ದು, ಗ್ರಾಹಕರು ಧಾರ್ಮಿಕ ಭೇದ ಭಾವಗಳಿಲ್ಲದೇ ಮುಂಜಾನೆಯಿಂದಲೇ ಮಾಂಸ ಖರೀದಿಗೆ ಮುಗಿ ಬಿದ್ದರು.
ಕಳೆದೆರಡು ವರ್ಷಗಳಿಂದ ಕೊವಿಡ್ ನಿಂದಾಗಿ ಹಬ್ಬದ ಸಂಭ್ರಮ ಕಳೆಗುಂದಿತ್ತು. ಈ ಬಾರಿ ಯುಗಾದಿ ಆರಂಭದಲ್ಲಿಯೇ ಜಟ್ಕಾ ಕಟ್ ವಿವಾದ, ವ್ಯಾಪಾರಿಗಳಲ್ಲಿ ಆತಂಕ ಸೃಷ್ಟಿಸಿತ್ತು. ಆದರೆ, ಜಟ್ಕಾ ಮತ್ತು ಹಲಾಲ್ ಕಟ್ ವಿವಾದ ಯಾವುದೇ ಪರಿಣಾಮ ಬೀರಿಲ್ಲ.




