ಬೆಳ್ತಂಗಡಿ: ಮಾರಿಗುಡಿ ಮೈದಾನದಲ್ಲಿ ಪೌರಕಾರ್ಮಿಕನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ
ಬೆಳ್ತಂಗಡಿ: ಬೆಳ್ತಂಗಡಿ ಪಟ್ಟಣ ಪಂಚಾಯತ್ ನ ಪೌರಕಾರ್ಮಿಕನೊರ್ವನ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾದ ಘಟನೆ ಬೆಳ್ತಂಗಡಿ ನಗರದ ಮಾರಿಗುಡಿ ಸರಕಾರಿ ಮೈದಾನದಲ್ಲಿ ನಡೆದಿದೆ.


ಬೆಳ್ತಂಗಡಿ ಪಟ್ಟಣ ಪಂಚಾಯತ್ ನ ಪೌರಕಾರ್ಮಿಕ , ಮೈಸೂರು ಜಿಲ್ಲೆಯ ಕೆ.ಆರ್ ನಗರದ ನಿವಾಸಿ ಲಿಂಗಶೆಟ್ಟಿ(43) ಎಂದು ಗುರುತಿಸಲಾಗಿದೆ.
ಮೃತ ಲಿಂಗಶೆಟ್ಟಿ ಕಳೆದ ಜನವರಿ 7 ರಿಂದ ನಾಪತ್ತೆಯಾಗಿದ್ದರೂ ಬೆಳ್ತಂಗಡಿ ಪಟ್ಟಣ ಪಂಚಾಯತ್ ಸ್ಥಳೀಯ ಪೋಲಿಸ್ ಠಾಣೆಗೆ ದೂರು ನೀಡಿರಲಿಲ್ಲ. ಈ ಸಾಮಾನ್ಯ ಸಭೆಯಲ್ಲಿ ವ್ಯಾಪಕವಾಗಿ ಚರ್ಚೆಗೆ ಗ್ರಾಸವಾಗಿತ್ತು. ಆದರೂ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ್ ದೂರು ನೀಡದೆ ನಿರ್ಲಕ್ಷ್ಯ ತೋರಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕೆಲ ವರ್ಷಗಳ ಹಿಂದೆ ಕುಟುಂಬ ಸಮೇತ ಬೆಳ್ತಂಗಡಿಯಲ್ಲಿ ಬಾಡಿಗೆ ಮನೆಯಲ್ಲಿ ಕುಟುಂಬ ಸಮೇತ ವಾಸವಾಗಿದ್ದರು. ನಾಲ್ಕೈದು ವರ್ಷಗಳ ಹಿಂದೆ ಹೆಂಡತಿ ಮಕ್ಕಳನ್ನು ಊರಿಗೆ ಕಳುಹಿಸಿದ ಬಳಿಕ ಪೌರ ಕಾರ್ಮಿಕರ ವಿಶ್ರಾಂತಿ ಗೃಹದಲ್ಲಿ ಒಬ್ಬಾಂಟಿಯಾಗಿ ವಾಸವಾಗಿದ್ದರು.
ಕೆಲ ತಿಂಗಳ ಹಿಂದೆ ಯುವತಿಯೊಬ್ಬಳನ್ನು ಪ್ರೀತಿಸುವ ವಿಚಾರ ಮನೆಯವರಿಗೆ ಗೊತ್ತಾಗಿ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗುಣಮುಖನಾದ ಬಳಿಕ ವಾರಗಳ ಕೆಲಸಕ್ಕೆ ಗೈರುಹಾಜರಿಯಾಗಿ ಜನವರಿ 7 ರಂದು ಏಕಾಏಕಿ ನಾಪತ್ತೆಯಾಗಿದ್ದ ಲಿಂಗಶೆಟ್ಟಿಯ ಕೊಳೆತ ಶವ ಇಂದು ಸಂಜೆ ಪತ್ತೆಯಾಗಿದೆ.
ಬೆಳ್ತಂಗಡಿ ಮಾರಿಗುಡಿ ಮೈದಾನದಲ್ಲಿ ಕೊಳೆತ ಸ್ಥಿತಿಯಲ್ಲಿ ಶುಕ್ರವಾರ ಸಂಜೆ ಶವ ಪತ್ತೆಯಾದ ತಕ್ಷಣ ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸ್ಥಳದಲ್ಲಿ ಬಟ್ಟೆ, ಹಣ, ಗುರುತಿನ ಚೀಟಿ, ಚಪ್ಪಲಿ, ಶೂ ಪತ್ತೆಯಾಗಿದೆ. ಶವವನ್ನು ಬೆಳ್ತಂಗಡಿ ಸರಕಾರಿ ಶವಾಗರಕ್ಕೆ ಸಾಗಿಸಲಾಗಿದ್ದು ಈ ಬಗ್ಗೆ ಬೆಳ್ತಂಗಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.




