7ನೇ ದಿನವೂ ಪೆಟ್ರೋಲ್, ಡೀಸೆಲ್ ದರದಲ್ಲಿ ಹೆಚ್ಚಳ: ರಾಜ್ಯವಾರು ದರ ಹೀಗಿದೆ…
ನವದೆಹಲಿ: ಮಾರ್ಚ್ 29ರಂದು ಮತ್ತೆ ತೈಲ ಬೆಲೆ ಏರಿಕೆ ಮುಂದುವರಿದಿದ್ದು, ಪೆಟ್ರೋಲ್ ಪ್ರತಿ ಲೀಟರ್ ಗೆ 80 ಪೈಸೆ ಹಾಗೂ ಡೀಸೆಲ್ ಪ್ರತಿ ಲೀಟರ್ ಗೆ 70 ಪೈಸೆಯಷ್ಟು ಏರಿಕೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ.
ಸತತ ಏಳು ದಿನಗಳಿಂದ ಪೆಟ್ರೋಲ್ , ಡೀಸೆಲ್ ಬೆಲೆ ಏರಿಕೆ ಮಾಡಿದ ಪರಿಣಾಮ ದೆಹಲಿ, ಮುಂಬೈ, ಕೋಲ್ಕತಾ ಮತ್ತು ಚೆನ್ನೈ, ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 100 ರೂಪಾಯಿ ಗಡಿ ದಾಟಿದೆ.
ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಲೀಟರ್ ಬೆಲೆ 100.21 ರೂಪಾಯಿಗೆ ಏರಿಕೆಯಾಗಿದ್ದು, ಡೀಸೆಲ್ ಪ್ರತಿ ಲೀಟರ್ ಗೆ 91.47 ರೂಪಾಯಿಗೆ ಹೆಚ್ಚಳವಾಗಿದೆ. ವಾಣಿಜ್ಯ ನಗರಿ ಮುಂಬೈಯಲ್ಲಿ ಪೆಟ್ರೋಲ್ ಲೀಟರ್ ಗೆ 115.04 ರೂಪಾಯಿಗೆ ಮಾರಾಟವಾಗುತ್ತಿದ್ದು, ಡೀಸೆಲ್ ಬೆಲೆ ಲೀಟರ್ ಗೆ 99.25ರೂಪಾಯಿಗೆ ಏರಿಕೆಯಾಗಿದೆ.
ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 105.62 ರೂಪಾಯಿಗೆ ಏರಿಕೆಯಾಗಿದ್ದು, ಡೀಸೆಲ್ ಬೆಲೆ ಲೀಟರ್ ಗೆ 89.70 ರೂಪಾಯಿಗೆ ಹೆಚ್ಚಳವಾಗಿದೆ.





