ಕ್ರಿಪ್ಟೋ ಕರೆನ್ಸಿ, ಬಿಟ್ ಕಾಯಿನ್ ಟ್ರೇಡಿಂಗ್‌ನಲ್ಲಿ ವಂಚನೆ: ಇಬ್ಬರು ವಿದ್ಯಾರ್ಥಿಗಳ ಬಂಧನ
ಬೆಂಗಳೂರು: ಇನ್‌ಸ್ಟ್ರಾಗ್ರಾಂ ಸೇರಿ ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಕ್ರಿಪ್ಟೋ ಕರೆನ್ಸಿ ಅಥವಾ ಬಿಟ್ ಕಾಯಿನ್ ಟ್ರೇಡಿಂಗ್‌ನಲ್ಲಿ ಹೂಡಿದರೆ ಅಧಿಕ ಲಾಭ ಬರುತ್ತದೆ ಎಂಬ ಸಂದೇಶಗಳು, ಜಾಹೀರಾತುಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕಿದೆ.
ಇತ್ತೀಚೆಗೆ ಇನ್‌ಸ್ಟ್ರಾಗ್ರಾಂನಲ್ಲಿ ನಕಲಿ ಖಾತೆಗಳನ್ನು ತೆರೆದು ಕ್ರಿಪ್ಟೋ ಕರೆನ್ಸಿ, ಬಿಟ್ ಕಾಯಿನ್ ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಕೇವಲ 20 ನಿಮಿಷದಲ್ಲಿ ಶೇ.60 ಲಾಭ ಪಡೆಯಬಹುದು ಎಂದು ಜಾಹೀರಾತು ನೀಡಿ ವಂಚಿಸುತ್ತಿದ್ದ ಬೆಳಗಾವಿ ಮೂಲದ ಇಬ್ಬರು ವಿದ್ಯಾರ್ಥಿಗಳು ಈಶಾನ್ಯ ವಿಭಾಗದ ಸೆನ್ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಿವಾಸಿಗಳಾದ ಕಿರಣ್ ಭರತೇಶ್ (20), ಆರ್ಶದ್ ಮೊಹಿದ್ದೀನ್ (21) ಬಂಧಿತರು.
ಆರೋಪಿಗಳ ಬ್ಯಾಂಕ್ ಖಾತೆಯಲ್ಲಿದ್ದ 40 ಸಾವಿರ ರೂ. ಜಪ್ತಿ ಮಾಡಿದ್ದು, 2 ಮೊಬೈಲ್, 3 ಸಿಮ್ ಕಾರ್ಡ್ ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಇತ್ತೀಚೆಗೆ ಯಲಹಂಕದ ಅಭಿನ್ ಶಹದ್ ಎಂಬಾತನಿಗೆ 26 ಸಾವಿರ ರೂ. ವಂಚಿಸಿದ್ದರು.
ಅಲ್ಲದೆ, ಈ ಹಿಂದೆಯೂ ಇದೇ ಮಾದರಿಯಲ್ಲಿ ಬನಶಂಕರಿ ನಿವಾಸಿಯೊಬ್ಬರಿಗೂ ವಂಚಿಸಿದ್ದು, ದಕ್ಷಿಣ ವಿಭಾಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದು ಬೆಳಕಿಗೆ ಬಂದಿದೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಡಾ| ಅನೂಪ್ ಎ.ಶೆಟ್ಟಿ ಹೇಳಿದರು.





