ಕೊಂಡೋತ್ಸವ ನೋಡುತ್ತಿದ್ದಾಗ ಚಾವಣಿ ಕುಸಿದು ಮಹಿಳೆ ಮೃತ್ಯು, 25 ಮಂದಿಗೆ ಗಾಯ
ಮಂಡ್ಯ: ಮನೆಯ ಮೇಲೆ ನಿಂತು ಗ್ರಾಮದೇವತೆ ಹಬ್ಬದ ಕೊಂಡೋತ್ಸವ ನೋಡುತ್ತಿದ್ದಾಗ ಚಾವಣಿ ಕುಸಿದು ಮಹಿಳೆಯೊಬ್ಬರು ಮೃತಪಟ್ಟು, 25 ಮಂದಿ ಗಾಯಗೊಂಡ ಘಟನೆ ಮದ್ದೂರು ತಾಲ್ಲೂಕಿನ ಹುಲಿಗೆರೆಪುರ ಗ್ರಾಮದಲ್ಲಿ ಮಂಗಳವಾರ ನಸುಕಿನಲ್ಲಿ ನಡೆದಿದೆ.
ಹುಲಿಗೆರೆಪುರ ಗ್ರಾಮದ ಪುಟ್ಟಚೆನ್ನಮ್ಮ(50) ಮೃತಪಟ್ಟಿದ್ದಾರೆ. 8 ಮಕ್ಕಳು ಸೇರಿ ಮಹಿಳೆಯರು, ವೃದ್ಧರು ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಮದ್ದೂರು ತಾಲ್ಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ಗ್ರಾಮದಲ್ಲಿ ಸೋಮವಾರ ಬಂಡಿ ಉತ್ಸವ ಇತ್ತು. ಮಂಗಳವಾರ ನಸುಕಿನಲ್ಲಿ ಗ್ರಾಮದೇವತೆಯ ಕೊಂಡೋತ್ಸವ ಆರಂಭವಾಗಿತ್ತು.
ಕೊಂಡೋತ್ಸವ ವೀಕ್ಷಿಸಲು ಸುತ್ತಮುತ್ತಲಿನ ಗ್ರಾಮದಿಂದ ಸಾವಿರಾರು ಜನರು ಬಂದಿದ್ದರು. ಗ್ರಾಮದ ಸಿದ್ದೇಗೌಡ ಎಂಬುವರಿಗೆ ಸೇರಿದ ಮನೆಯ ಚಾವಣಿ ಮೇಲೆ ನಿಂತು ನೂರಾರು ಜನ ವೀಕ್ಷಣೆ ಮಾಡುತ್ತಿದ್ದರು.
ಮನೆಯ ಮೇಲೆ ಇನ್ನಷ್ಟು ಜನ ಬರುತ್ತಲೇ ಇದ್ದರು. ಭಾರ ಜಾಸ್ತಿಯಾದ ಕಾರಣ ಚಾವಣಿ ಕುಸಿದಿದೆ. ಆ ಸಂದರ್ಭದಲ್ಲಿ ಮನೆಯ ಒಳಗೆ ಯಾರೂ ಇಲ್ಲದ ಕಾರಣ ಹೆಚ್ಚಿನ ಅನಾಹುತ ತಪ್ಪಿದೆ.
ಮದ್ದೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಗ್ರಾಮಸ್ಥರು ಗಾಯಾಳುಗಳನ್ನು ಆಸ್ಪತ್ರೆಗೆ ಕಳುಹಿಸಲು ನೆರವಾದರು.





