ಅಡಿಕೆ ಗಿಡಗಳ ಹಳದಿ ರೋಗಕ್ಕೆ ಔಷಧಿ ಸಿಂಪಡನೆ:
ದಕ್ಷಿಣ ಕನ್ನಡ ಜಿಲ್ಲೆಯ ತೆಂಗು ರೈತ ಉತ್ಪಾದಕರ ಸಂಸ್ಥೆಯ ತಂಡದಿಂದ ಪ್ರಯೋಗ
ವಿಟ್ಲ: ವಿಟ್ಲದಲ್ಲಿ ಕೇಂದ್ರ ಕಚೇರಿ ಹೊಂದಿರುವ ದಕ್ಷಿಣ ಕನ್ನಡ ಜಿಲ್ಲೆಯ ತೆಂಗು ರೈತ ಉತ್ಪಾದಕರ ಸಂಸ್ಥೆ ವಿಜ್ಞಾನಿಗಳ ನೇತೃತ್ವದಲ್ಲಿ ಅಡಿಕೆ ಮತ್ತು ತೆಂಗಿನ ಮರಗಳಿಗೆ ಬಾಧಿಸುತ್ತಿರುವ ಹಳದಿ ರೋಗದ ವಿರುದ್ಧ ಹೋರಾಡಲು ಸಜ್ಜಾಗುವ ಮೂಲಕ ರೈತರ ಕಷ್ಟಗಳಿಗೆ ಸ್ಪಂದಿಸಲು ಮುಂದಾಗಿದೆ.
ದ.ಕ ಜಿಲ್ಲೆಯಾದ್ಯಂತ ಅಡಿಕೆ ಮರಗಳಿಗೆ ಹಳದಿ ರೋಗ ಬಾಧಿಸಿದ್ದರಿಂದ ಜಿಲ್ಲೆಯ ರೈತರು ಅಡಿಕೆ ಕೃಷಿಯಿಂದ ಹಿಂದೆ ಸರಿಯಲು ಮುಂದಾಗುತ್ತಿದ್ದಾರೆ. ಈಗಾಗಲೇ ಅಡಿಕೆ ಗಿಡಗಳಲ್ಲಿ ಹಳದಿ ರೋಗ ಕಂಡು ಬಂದಿದ್ದು, ಅವುಗಳಿಗೆ ಶಾಶ್ವತ ಪರಿಹಾರ ಇದುವರೆಗೆ ಸಾಧ್ಯವಾಗಿಲ್ಲ. ಕಾಲಕ್ರಮೇಣ ಈ ಹಳದಿ ರೋಗ ತೆಂಗಿನ ಮರಗಳಿಗೆ ಪರಿವರ್ತನೆಗೊಳ್ಳುವ ಸಾಧ್ಯತೆಗಳಿವೆ ಈ ಬಗ್ಗೆ ಮನಗಂಡು ಅಡಿಕೆ ಮರದಿಂದಲೇ ಹಳದಿ ರೋಗವನ್ನು ತಡೆಗಟ್ಟಲು ಸಂಸ್ಥೆಯ ವಿಜ್ಞಾನಿ ಡಾ. ವಿಷು ಕುಮಾರ್ ಮತ್ತು ಅವರ ತಂಡ ಸುಳ್ಯ ತಾಲೂಕಿನ ತೋಟಗಳಿಗೆ ಪರಿಶೀಲನೆ ನಡೆಸಿದೆ. ದ. ಕ ಜಿಲ್ಲೆಯ ತೆಂಗು ರೈತ ಸಂಸ್ಥೆಯ ವಿಜ್ಞಾನಿಗಳು ಸುಳ್ಯ ತಾಲ್ಲೂಕಿನ ಮರ್ಕಂಜ ಗ್ರಾಮದ ಆಯ್ದ ಕೃಷಿ ಕುಟುಂಬದ ತೆಂಗು ಹಾಗೂ ಅಡಿಕೆ ತೋಟಗಳಿಗೆ ಭೇಟಿ ಕೊಟ್ಟು ಪರಿಶೀಲನೆ ಮಾಡಿ ಕೆಲವು ತೋಟಗಳಿಗೆ ಪ್ರಾಯೋಗಿಕವಾಗಿ ಔಷದಿ ಸಿಂಪಡಿಸಿ ರೈತರಿಗೆ ಮಾಹಿತಿ ನೀಡಿದರು.
ಈಗ ಔಷಧಿ ಸಿಂಪಡಿಸಲಾಗಿದ್ದು, ಒಂದು ತಿಂಗಳಲ್ಲಿ ಇದರ ಪರಿಣಾಮ ತಿಳಿಯುತ್ತದೆ. ಮತ್ತು ಒಟ್ಟು ಮೂರು ತಿಂಗಳಿನಲ್ಲಿ ಇದರ ಸಂಪೂರ್ಣ ಫಲಿತಾಂಶ ಹೊರಬರಲಿದೆ ಎಂದು ವಿಜ್ಞಾನಿ ಡಾ.ವಿಷುಕುಮಾರ್ ಅವರು ಹೇಳಿದ್ದಾರೆ.
ವಿಟ್ಲದಲ್ಲಿ ಇತ್ತೀಚೆಗೆ ದ.ಕ ಜಿಲ್ಲಾ ತೆಂಗು ಉತ್ಪಾದಕರ ಕಂಪೆನಿ ಕೇಂದ್ರ ಕಚೇರಿ ಹೊಂದಿದ್ದು, ತೆಂಗು ಬೆಲೆಗಾರರ ಕಷ್ಟಗಳಿಗೆ ನಿರಂತರವಾಗಿ ಸ್ಪಂದಿಸಲಿದೆ. ಹಳದಿ ರೋಗ ಮುಂದಿನ ದಿನಗಳಲ್ಲಿ ತೆಂಗಿನ ಮರಗಳಿಗೆ ಪರಿವರ್ತನೆಯಾಗುವ ಸಾಧ್ಯತೆಗಳಿದ್ದು, ಈ ಬಗ್ಗೆ ಗಮನಹರಿಸಿ ಈ ಪ್ರಯೋಗ ನಡೆಸಿದೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ತೆಂಗು ರೈತ ಉತ್ಪಾದಕರ ಸಂಸ್ಥೆಯ ಜಿಲ್ಲಾಧ್ಯಕ್ಷ ಪ್ರಸಾದ್ ಶೆಟ್ಟಿ ಕೊಲ್ಯ ಹೇಳಿದ್ದಾರೆ.
ಸುಳ್ಯ ತಾಲೂಕಿನ ಹಲವೆಡೆ ಹಳದಿ ರೋಗದಿಂದ ಈ ಭಾಗದ ಹಲವು ರೈತರು ಭಾರೀ ನಷ್ಟ ಅನುಭವಿಸುತ್ತಿದ್ದು, ಇದೀಗ ತೆಂಗು ಉತ್ಪಾದಕರ ತಂಡ ಭೇಟಿ ನೀಡಿದ್ದರಿಂದ ಭವಿಷ್ಯದ ಬಗ್ಗೆ ಉತ್ತಮ ಭರವಸೆ ಮೂಡಿದೆ ಎಂದು ಅಡಿಕೆ ಕೃಷಿಕರು ಹೇಳಿದ್ದಾರೆ.
ಸುಳ್ಯದ ವಿವಿಧ ತೋಟಗಳಿಗೆ ಭೇಟಿ ನೀಡಿದ ತಂಡ ಪ್ರಯೋಗವಾಗಿ ಔಷಧಿ ಸಿಂಪಡಿಸಿದೆ. ಈ ಹಿಂದೆ ಹಲವು ಸಂಶೋಧಕರು ಬಂದರು ಯಾವುದೇ ಪ್ರಯೋಜನವಾಗಿಲ್ಲ. ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ತೆಂಗು ರೈತ ಉತ್ಪಾದಕರ ತಂಡ ಭೇಟಿ ನೀಡಿ, ಶಾಶ್ವತ ಪರಿಹಾರಕ್ಕೆ ಹೆಜ್ಜೆ ಇಟ್ಟಿದ್ದು, ಇದು ಎಷ್ಟರ ಮಟ್ಟಿಗೆ ಯಶಸ್ವಿ ಸಾಧಿಸುತ್ತದೆ ಎಂದು ಕಾದು ನೋಡಬೇಕಿದೆ.
ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಕುಸುಮರಾಜ್, ಮತ್ತು ಸಂಸ್ಥೆಯ ಸಿ. ಇ. ಓ, ಜಿಲ್ಲೆಯ ನೋಡೆಲ್ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಹಾಗೂ ಸುತ್ತ ಮುತ್ತಲಿನ ಕೃಷಿಕರು ಹಾಜರಿದ್ದರು.