ಗಾಂಜಾ ಮಾರಾಟ: ಇಬ್ಬರು ಅಂತರ್ರಾಜ್ಯ ಡ್ರಗ್ಸ್ ಪೆಡ್ಲರ್‌ಗಳ ಬಂಧನ
ಬೆಂಗಳೂರು : ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಅಂತರರಾಜ್ಯ ಡ್ರಗ್ಸ್ ಪೆಡ್ಲರ್‌ಗಳನ್ನು ರಾಜಗೋಪಾಲ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು ಫೆ.26ರಂದು ಪೀಣ್ಯ 4ನೇ ಹಂತದ 12ನೇ ಕ್ರಾಸ್ ಬಳಿ ದ್ವಿಚಕ್ರ ವಾಹನದಲ್ಲಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ಕೈಗೊಂಡು ಇಬ್ಬರನ್ನು ಬಂಧಿಸಲಾಗಿದೆ. ಆರೋಪಿಗಳು ಆಂಧ್ರಪ್ರದೇಶದ ವಿಶಾಖಪಟ್ಟಣಂನಿಂದ ಕಡಿಮೆ ದರಕ್ಕೆ ಗಾಂಜಾ ಖರೀದಿಸಿ ರೈಲಿನ ಮೂಲಕ ತಮಿಳುನಾಡಿನ ಹೊಸೂರಿಗೆ ತಂದು ಮನೆಯಲ್ಲಿ ಬಚ್ಚಿಡುತ್ತಿದ್ದರು.
ವಿಶಾಖಪಟ್ಟಣದಿಂದ ರೈಲಿನಲ್ಲಿ ಹೊಸೂರಿಗೆ ಅಕ್ರಮವಾಗಿ ಕಳ್ಳಸಾಗಣೆ ಮಾಡಿ, ತಮ್ಮ ಮನೆಯಲ್ಲಿ ದಾಸ್ತಾನು ಮಾಡಿದ್ದರು. ವಿದ್ಯಾರ್ಥಿಗಳು ಮತ್ತು ಇತರರಿಗೆ ಮಾರಾಟ ಮಾಡಲು ಅವರು ಸಣ್ಣ ಪ್ರಮಾಣದ ಗಾಂಜಾವನ್ನು ನಗರಕ್ಕೆ ತರುತ್ತಿದ್ದರು, ಎಂದು ಪೊಲೀಸರು ಹೇಳಿದ್ದಾರೆ.
ಬಳಿಕ ಗಿರಾಕಿಗಳ ಬೇಡಿಕೆ ಆಧರಿಸಿ ಬೆಂಗಳೂರಿಗೆ ಗಾಂಜಾ ತರುತ್ತಿದ್ದರು. ಪ್ರತಿಷ್ಠಿತ ಕಾಲೇಜುಗಳ ಬಳಿ ವಿದ್ಯಾರ್ಥಿಗಳು, ಐಟಿ ಉದ್ಯೋಗಿಗಳು ಸೇರಿದಂತೆ ಮಾದಕ ವ್ಯಸನಿಗಳಿಗೆ ದುಬಾರಿ ಮೊತ್ತಕ್ಕೆ ಗಾಂಜಾ ಮಾರಾಟ ಮಾಡುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆರೋಪಿಗಳು ಕಾಂಡಿಮೆಂಟ್ಸ್ ವ್ಯಾಪಾರ ನಡೆಸುತ್ತಿದ್ದರು, ಆದರೆ ಐಷಾರಾಮಿ ಜೀವನ ನಡೆಸಲು ಸಾಕಷ್ಟು ಆದಾಯವನ್ನು ಹೊಂದಿರಲಿಲ್ಲ ಹೀಗಾಗಿ ಅವರು ಗಾಂಜಾ ಮಾರಾಟ ಮಾಡುತ್ತಿದ್ದರು ಎಂದು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯಿಂದ 21.18 ಕೆಜಿ ಗಾಂಜಾ ಮತ್ತು ದ್ವಿಚಕ್ರ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.