ಶಾಲಾ ವಾಹನ ಢಿಕ್ಕಿ: ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತ್ಯು
ಮುದ್ದೇಬಿಹಾಳ: ಶಾಲಾ ವಾಹನ ಹಾಗೂ ಬೈಕ್ ಮಧ್ಯೆ ಢಿಕ್ಕಿಯಾಗಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬುಧವಾರ ತಾಲ್ಲೂಕಿನ ಜೈನಾಪೂರ ಕ್ರಾಸ್ ಬಳಿ ನಡೆದಿದೆ.
ಚವನಬಾವಿ ಗ್ರಾಮದ ಶಿವಪ್ಪ ಹಣಮಪ್ಪ ಪೂಜಾರಿ(30) , ಸಂಗಪ್ಪ ಬಸಪ್ಪ ಪೂಜಾರಿ(40) ಸಾವನ್ನಪ್ಪಿದ ದುರ್ದೈವಿಗಳು. ಅಪಘಾತದ ರಭಸಕ್ಕೆ ಒಬ್ಬನ ಕಾಲು ತುಂಡರಿಸಿ ಬಿದ್ದಿದ್ದು ಅಪಘಾತದ ಭೀಕರತೆಗೆ ಸಾಕ್ಷಿಯಾಗಿತ್ತು.
ಚವನಬಾವಿ ರೇವಣಸಿದ್ದೇಶ್ವ ಪ್ರಾಥಮಿಕ ಶಾಲೆಯ ವಾಹನ ವಿದ್ಯಾರ್ಥಿಗಳನ್ನು ತುಂಬಿಕೊಂಡು ನಾಲತವಾಡದಿಂದ ಚವನಬಾವಿ ಗ್ರಾಮದ ಶಾಲೆಯ ಕಡೆಗೆ ಬರುತ್ತಿತ್ತು. ಚವನಬಾವಿಯಿಂದ ನಾಲತವಾಡದತ್ತ ಬೈಕ್ ಸವಾರರು ತೆರಳಿದ್ದರು. ಘಟನಾ ಸ್ಥಳಕ್ಕೆ ಸಿಪಿಐ ಆನಂದ ವಾಘಮೋಡೆ, ಪಿಎಸೈ ರೇಣುಕಾ ಜಕನೂರ ಭೇಟಿ ನೀಡಿದ್ದಾರೆ. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





