ಸಮವಸ್ತ್ರ ಬಣ್ಣದ ಹಿಜಾಬ್ ಧರಿಸಲು ಅವಕಾಶ ನೀಡಿ: ವಕೀಲ ದೇವದತ್ ಕಾಮತ್
ಬೆಂಗಳೂರು: ಮಧ್ಯಂತರ ಆದೇಶವನ್ನು ಮುಂದುವರೆಸದಂತೆ ಹೈಕೋರ್ಟ್ ಗೆ ಮನವಿ ಮಾಡಿರುವ ವಿದ್ಯಾರ್ಥಿ ಪರ ವಕೀಲ ದೇವದತ್ ಕಾಮತ್, ಈ ವಿಚಾರದ ಬಗ್ಗೆ ನಿರ್ಧಾರ ಕೈಗೊಳ್ಳಲು ಸಮಯ ತೆಗೆದುಕೊಳ್ಳುವುದರಿಂದ ಸದ್ಯಕ್ಕೆ ಸಮವಸ್ತ್ರ ಬಣ್ಣದ ಹಿಜಾಬ್ ಧರಿಸಲು ಅವಕಾಶ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದರು.
ಶಾಲೆ ವಿದ್ಯಾರ್ಥಿಗಳಿಗೆ ಸಮವಸ್ತ್ರ ನಿಗದಿಪಡಿಸಿ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿ ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ ಮತ್ತು ನ್ಯಾಯಮೂರ್ತಿಗಳಾದ ಕೃಷ್ಣ ಎಸ್ ದೀಕ್ಷಿತ್ ಮತ್ತು ಜೆಎಂ ಖಾಜಿ ಅವರನ್ನೊಳಗೊಂಡ ಪೂರ್ಣ ಪೀಠದ ಮುಂದೆ ದೇವದತ್ ಕಾಮತ್ ಈ ವಾದವನ್ನು ಮಂಡಿಸಿದರು.
ಹಿಜಾಬ್ ಧರಿಸುವುದು ತಲೆತಲಾಂತರಗಳಿಂದ ಬೆಳೆದು ಬಂದ ಪದ್ಧತಿಯಾಗಿದ್ದು, ಸಂವಿಧಾನದ 25ನೇ ಪರಿಚ್ಛೇದದ ಅಡಿಯಲ್ಲಿ ರಕ್ಷಿಸಲಾಗಿದೆ ಎಂದು ವಾದಿಸಿದ ಅವರು, ರಾಜ್ಯ ಸರ್ಕಾರ ಅಧಿಕಾರವನ್ನು ಹೇಗೆ ಚಲಾಯಿಸಬೇಕು ಎಂಬುದರ ಕುರಿತು ಕೆಲವು ಮಾರ್ಗದರ್ಶನಗಳಿವೆ ಮತ್ತು ಶಿಕ್ಷಣ ಕಾಯ್ದೆಯಡಿ ಅಧಿಕಾರ ಬಳಸಿ ಧಾರ್ಮಿಕ ಪದ್ಧತಿಯನ್ನು ರದ್ದುಗೊಳಿಸುವುದು ಸರಿಯಾದ ಮಾರ್ಗವಲ್ಲ ಎಂದರು.




