February 3, 2026

ಹಿಜಾಬ್ ಧಾರಣೆಯೇ ಒಂದು ಪ್ರಗತಿಪರತೆ: ಹಿಜಾಬ್ ಧಾರಣೆಯೇ ಒಂದು ಬಂಧಮುಕ್ತಿ: ಇಮ್ರಾನ್ ಪಾಂಡವರಕಲ್ಲು

0
IMG_20220201_222112.jpg

ಮುಸ್ಲಿಂ ಮಹಿಳೆಯರು ಧರಿಸುವ ಸ್ಕಾರ್ಫ್ ಅಥವಾ ಶಿರವಸ್ತ್ರ ಅಥವಾ ಹಿಜಾಬ್ ಧಾರಣೆಯನ್ನು ಹಿಜಾಬ್ ಧಾರಣೆಯು ಮುಸ್ಲಿಂ ಮಹಿಳೆಯರಿಗೆ ವಿಧಿಸುವ ದಿಗ್ಬಂಧನ, ಸ್ವಾತಂತ್ರ್ಯದ ಕಸಿಯುವಿಕೆ’ ಎಂದು ತಮ್ಮ ಫೇಸ್ ಬುಕ್ ವಾಲ್, ಟ್ವಿಟರ್, ಸುದ್ದಿತಾಣದ ಅಂಕಣ ಹಾಗೂ ಪತ್ರಿಕೆಗಳಲ್ಲಿ ವಾದಿಸುತ್ತಿರುವ ಕೆಲ ಪ್ರಗತಿಪರರು, ಚಿಂತಕರು ಬುದ್ಧಿಜೀವಿಗಳು ಹಾಗೂ ಅದರೊಟ್ಟಿಗೆ ಕೆಲ ಮುಸ್ಲಿಂ ಬುದ್ಧಿಜೀವಿಗಳಿಗೆ, ಅವರ ಸೃಜನಶೀಲ, ವಿವೇಚನಾಶೀಲ ವ್ಯಾಪ್ತಿಯ ಪರಿಧಿಯನ್ನು ಮೀರಿದ ಒಂದಲ್ಪ ಮಾಹಿತಿಗಳನ್ನು ಶ್ರುತಪಡಿಸಲು ಬಯಸುತ್ತೇನೆ.

ಹಿಜಾಬ್ ಧಾರಣೆಯೆಂಬುವುದು ಒಬ್ಬ ಮುಸ್ಲಿಂ ಮಹಿಳೆಯು ತನ್ನ ಇಳಿವಯಸ್ಸಿನಿಂದಲೂ ಅಭ್ಯಸಿಸಿಕೊಂಡು ಬರುತ್ತಿರುವ ಸಂಸ್ಕೃತಿ ಮಾತ್ರವಲ್ಲ. ಅದೊಂದು ಆಯ್ಕೆಯಾಗಿದೆ. ಒಂದು ಆಚರಣೆ, ಸಂಸ್ಕೃತಿಗೆ ಆದ್ಯತೆ ಕೊಡುವುದಕ್ಕಿಂತ ಆಯ್ಕೆಗೆ ಹೆಚ್ಚಿನ ಆದ್ಯತೆ ಕೊಡಬೇಕಾಗಿದೆ. ಆ ಆಯ್ಕೆಯು ಸಂಪ್ರದಾಯ ಪ್ರೇರಿತ ಆಯ್ಕೆ ಎನ್ನುವುದಕ್ಕಿಂತ ವಿವೇಚನಾತ್ಮಕತೆಯ ಆಯ್ಕೆ ಎನ್ನಬಹುದು.

ಇದರ ಕುರಿತು ಮುಸ್ಲಿಂ ಮಹಿಳೆಯರಲ್ಲಿ ಒಂದು ಸುವ್ಯಕ್ತವಾದ, ಸ್ಫುಟವಾದ ಸೃಷ್ಟಿಶೀಲ ಹಾಗೂ ಸೃಜನಶೀಲ ಸಮರ್ಥನೀಯ ಸಕಾರಣವಿದೆ. ಅದೇನೆಂದರೆ ಹಿಜಾಬ್ ಧಾರಣೆಯು ಅವರಲ್ಲಿ ಒಂದು ಸಂರಕ್ಷಣೆ, ಘನತೆ ಮತ್ತು ಸೌಂದರ್ಯವನ್ನು ಮೂಡಿಸುತ್ತದೆ ಎನ್ನುವಂಥದ್ದು.

ಅದು ಕೆಲ ಪ್ರಗತಿಪರರು ಕಿಟಕಿಯ ಹೊರಗೆ ಇಣುಕಿದಷ್ಟಿನ ವ್ಯಾಪ್ತಿಯಲ್ಲಿ ಚಿಂತಿಸಿ ‘ ಹಿಜಾಬ್ ಧಾರಣೆಯು ಅವರನ್ನು ಕತ್ತಲೆಯಲ್ಲಿರಿಸುತ್ತದೆ, ಪೀಡಿಸುತ್ತದೆ, ದಮನಿಸುತ್ತದೆ ಹಾಗೂ ಸ್ವಾತಂತ್ರ್ಯವನ್ನು ಕಸಿಯುತ್ತದೆ’ ಎಂದೆಲ್ಲಾ ವ್ಯಕ್ತಪಡಿಸುವ ಮೂಲಕ ಒಂದೇ ಚೌಕಟ್ಟಿನ ನಿಲುವಿನಲ್ಲಿ ಪ್ರಚುರಪಡಿಸುತ್ತಿದ್ದಾರೆ.

ಮುಸ್ಲಿಂ ಮಹಿಳೆಯರಿಗೆ ತಮ್ಮ ಹಿಜಾಬ್ ಧಾರಣೆಯಿಂದ ಒಂದೇ ಒಂದು ಸ್ವಾತಂತ್ರ್ಯವು ಕೂಡ ಕಸಿಯಲಾಗುತ್ತಿಲ್ಲ. ಹಿಜಾಬ್ ಧಾರಣೆಯಲ್ಲಿ ಅವರು ಆನಂದತುಂದಿಲರಾಗಿರುತ್ತಾರೆ. ಹಿಜಾಬ್ ಧಾರಣೆಯು ಅವರಿಗೆ ಒಂದು ಸೊಬಗಿನ ಸೌಂದರ್ಯವನ್ನು ಕಲ್ಪಿಸುತ್ತದೆ. ಇದರಿಂದ ಅವರು ಅತೀ ತೃಪ್ತಿದಾಯಕರಾಗಿರುತ್ತಾರೆ. ಹಿಜಾಬ್ ಧಾರಣೆಯನ್ನು ಅವರು ಘನತೆ, ಗೌರವ, ನೆಮ್ಮದಿ, ಸಂರಕ್ಷಣೆಯ ಕನ್ನಡಿಯಾಗಿ ಕಾಣುತ್ತಾರೆ. ಹಿಜಾಬ್ ಅವರಿಗೆ ಪಕ್ವತೆಯನ್ನು, ದೃಢತೆಯನ್ನು ನೀಡುತ್ತದೆ.

ಆದರೆ ವಿಪರ್ಯಾಸವೇನೆಂದರೆ, ಬುದ್ಧಿಜೀವಿಗಳು ಟೀಕಿಸುವ ಹಾಗೆ ಎಂದಿಗೂ ಮುಸ್ಲಿಂ ಮಹಿಳೆಯರು ಹಿಜಾಬ್ ಧಾರಣೆಯನ್ನು ದಿಗ್ಬಂಧನದಂತೆ ಕಂಡುಕೊಳ್ಳಲಿಲ್ಲ. ಒಂದು ದಿಗ್ಬಂಧನದಂತೆ ಕಂಡುಕೊಂಡಿದ್ದರೆ ಎಂದೋ ಹಿಜಾಬ್ ಗೆ ಮುಸ್ಲಿಂ ಮಹಿಳೆಯರೇ ನಕಾರ ತೋರುತ್ತಿದ್ದು, ಅಲ್ಲಗಳೆಯುತ್ತಿದ್ದು ಅದು ಎಂದೋ ಅಗೋಚರವಾಗುತ್ತಿತ್ತು. ಅದು ಆಗಲಿಲ್ಲ .ಯಾಕೆಂದರೆ ಅಂದೂ, ಇಂದೂ, ಮುಂದೂ ಮುಸ್ಲಿಂ ಮಹಿಳೆಯರು ವಿವೇಚನಾತ್ಮಕತೆಯಲ್ಲಿ ಬುದ್ಧಿಜೀವಿಗಳಾಗಿರುತ್ತಾರೆ. ಹಿಜಾಬ್ ಧಾರಣೆ ಅವರಿಗೆ ಅವಶ್ಯಕ ವ್ಯೂಹವಾಗಿದ್ದುಕೊಂಡೇ ಬಂದಿದೆ. ಎಂದಿಗೂ ಅವರು ಅದನ್ನು ಅಲಕ್ಷಿಸಿಲ್ಲ. ಆದ್ದರಿಂದ ಹಿಜಾಬ್ ಅವರಿಗೆ ಎಂದಿಗೂ ನಿರ್ವಿವಾದದ ಸಂಗತಿ.

ಮಹಿಳೆಯರಿಗೆ ಹಿಜಾಬ್ ಧಾರಣೆಯು ಪೀಡನೆ, ತಾರತಮ್ಯ, ಅಸಹ್ಯತನಗಳೆಂಬ ಕೆಲ ದುರುಳತೆಗಳಿಂದ ಅವರನ್ನು ಬಂಧಮುಕ್ತಿಗೊಳಿಸಿ, ಸಂರಕ್ಷಣೆಯೆಂಬ ಗುರಾಣಿಯನ್ನು ಭೂಮಿಕೆ ಮಾಡಿಕೊಂಡಿದೆ. ಇದನ್ನರಿಯದ ‘ಅವರಿಗೆ ಶಿರ,ಕೂದಲು ತೋರಿಸಲು ನಕಾರ ತೋರುವಂತೆ ದಿಗ್ಬಂಧನ ಮಾಡಿದೆ’ ಎಂಬ ಕೆಲ ಪ್ರಗತಿಪರರು ಅಜ್ಞ ಟೀಕೆಗಳನ್ನು, ವಾದಗಳನ್ನು ಮಾಡುತ್ತಿದ್ದಾರೆ. ನಿಜವಾಗಿಯೂ ಮಹಿಳೆಯರಿಗೆ ಶಿರ,ಕೂದಲು ತೋರಿಸಲು ಒಂದಲ್ಪವೂ ಬಯಕೆ ಇರುವುದಿಲ್ಲ. ಮತ್ತೆಲ್ಲಿ ದಿಗ್ಬಂಧನವಾಗುವುದು.

ಒಂದು ಸಂರಕ್ಷಣೆಯನ್ನು ,ಘನತೆಯನ್ನು ,ಸೌಂದರ್ಯವನ್ನು ಬಯಸುವುದಾದರೆ ಅದೂ ಒಂದು ಪ್ರಗತಿಪರತೆ. ಅದನ್ನು ಈ ಹಿಜಾಬ್ ಧಾರಣೆಯ ಮೂಲಕ ಮಹಿಳೆಯರು ಪ್ರತಿಪಾದಿಸುತ್ತಿದ್ದಾರೆ. ಆದ್ದರಿಂದ ಹಿಜಾಬ್ ಧಾರಣೆ ಒಂದು ಪ್ರಗತಿಪರತೆ. ಕೆಲ ಬುದ್ಧಿಜೀವಿಗಳು ಏನೋ ವಾಸ್ತವವಲ್ಲದ ತರ್ಕಗಳಿಗೆ ಸಂಶಯಾಕುಲಿತರಾಗಿ, ಊಹಾತೀತರಾಗಿ ಹಿಜಾಬ್ ಧಾರಣೆಗೆ ನಕಾರ ತೋರುತ್ತಿದ್ದಾರೆ. ಆದರೆ ಒಳಮರ್ಮ ಅವರ ಊಹೆಗೂ ಮೀರಿದೆ. ನೀವು ಕಾಣುವ ಪರಿ ನಕರಾತ್ಮಕ ಚಿಂತನೆಯಲ್ಲಿರದೆ, ಸಕರಾತ್ಮಕ ದೃಷ್ಟಿಕೋನದಲ್ಲಿರಲಿ. ತಮ್ಮ ಪ್ರಗತಿಪರತೆಯನ್ನು, ಜಾತ್ಯಾತೀತೆಯನ್ನು ಮೆಚ್ಚಿಸಿಕೊಳ್ಳಲು ಸ್ಥೂಲವಾಗಿ ಆಲೋಚಿಸದಿರುವುದು ಉತ್ತಮ. ಇನ್ನೂ ಆಳವಾಗಿ ಇದರ ಬಗ್ಗೆ ಅಧ್ಯಯನ ಪ್ರಗತಿಪರರಿಗೆ ಒಳಿತು.

ಇದರ ಜೊತೆಗೇ ಕೆಲ ಹಿಜಾಬ್ ಧರಿಸದ ಮುಸ್ಲಿಂ ಮಹಿಳೆಯರನ್ನು ಟೀಕಾಕಾರರು ತಮ್ಮ ವಾದಗಳಿಗೆ ಕನ್ನಡಿಯಂತೆ ತೋರಿಸುತ್ತಿರುವುದು ಅಸಮಂಜಸವೇನಲ್ಲ. ಯಾಕೆಂದರೆ ಹಿಜಾಬ್ ಧಾರಣೆ ಒಬ್ಬ ಹೆಣ್ಣು ಮಗಳ ಆಯ್ಕೆ. ಹಿಜಾಬ್ ಧರಿಸದ ಮಹಿಳೆಯರು ಹಿಜಾಬನ್ನು ದಿಗ್ಬಂಧನದಂತೆ ಕಂಡರೆ ಅವರ ಪಕ್ವತೆಯ, ಘನತೆಯ ಕೊರತೆಯೇ ಹೊರತು ನಕಾರದ ಸೂಚನೆಯಲ್ಲ. ಅವರಿಗೆ ಹಿಜಾಬ್ ನೀಡುವ ಘನತೆ,ಗೌರವ, ಸೌಂದರ್ಯ ಅಗತ್ಯವಿಲ್ಲ. ಅವಳಿಗೆ ತನ್ನ ಹಿಜಾಬಿನ ಸ್ಪೂರ್ತಿದಾಯಕ ಘನತೆ,ಸೌಂದರ್ಯಕ್ಕಿಂತ ಓರೆಗಣ್ಣಿನ, ಸ್ಫುಟವಲ್ಲದ ದೃಷ್ಟಿಕೋನದ ಘನತೆ ,ಸೌಂದರ್ಯ ಆಯ್ಕೆಯಾಗಿ ಕಂಡಿತು. ಆದ್ದರಿಂದ ಅವಳು ಹಿಜಾಬಿಗೆ ನಕಾರ ತೋರುತ್ತಿರಬಹುದು. ಇದರ ಆಧಾರದಲ್ಲಿ ಹಿಜಾಬ್ ಧಾರಣೆಗೆ ನಕಾರ ತೋರುವ ತೀರ್ಮಾನ, ಟೀಕೆಯನ್ನು ಮಾಡುವುದಾದರೆ ಅದು ಅವೈಚಾರಿಕತೆ ಮತ್ತು ಅಸಮಂಜಸವಾಗಿದೆ.

Leave a Reply

Your email address will not be published. Required fields are marked *

error: Content is protected !!