ಹಿಜಾಬ್ ವಿವಾದ: ಫೆಬ್ರವರಿ 8 ಕ್ಕೆ ವಿಚಾರಣೆ ಮುಂದೂಡಿಕೆ
ಬೆಂಗಳೂರು: ಹಿಜಾಬ್ ಧರಿಸಿ ತರಗತಿಗೆ ಹಾಜರಾಗಲು ಮತ್ತು ತನ್ನ ಧಾರ್ಮಿಕ ಆಚರಣೆ ಪಾಲಿಸುವ ವಿಚಾರದಲ್ಲಿ ಮಧ್ಯಪ್ರವೇಶಿಸದಂತೆ ಉಡುಪಿ ಸರ್ಕಾರಿ ಪಿಯು ಕಾಲೇಜಿನ ಆಡಳಿತ ಮಂಡಳಿಗೆ ನಿರ್ದೇಶಿಸಬೇಕು ಎಂದು ವಿದ್ಯಾರ್ಥಿನಿಯೋರ್ವಳು ಕೋರಿರುವ ಮನವಿಯ ವಿಚಾರಣೆಯನ್ನು ಹೈಕೋರ್ಟ್ ಮಂಗಳವಾರಕ್ಕೆ (ಫೆಬ್ರವರಿ 8) ಮುಂದೂಡಿದೆ.
ಮೂಲಭೂತ ಹಕ್ಕಿನ ಪೈಕಿ ತನ್ನ ಧರ್ಮದ ಆಚರಣೆಯಾದ ಹಿಜಾಬ್ ಧರಿಸುವುದು ಮತ್ತು ಅದನ್ನು ಧರಿಸಿ ಕಾಲೇಜಿಗೆ ಪ್ರವೇಶಿಸುವ ವಿಚಾರದಲ್ಲಿ ಮಧ್ಯಪ್ರವೇಶ ಮಾಡದಂತೆ ಕಾಲೇಜಿನ ಆಡಳಿತ ಮಂಡಳಿಗೆ ನಿರ್ದೇಶಿಸಬೇಕು. ತನ್ನ ಧಾರ್ಮಿಕ ನಂಬಿಕೆಯ ಭಾಗವಾದ ಹಿಜಾಬ್ ಧರಿಸಲು ಮತ್ತು ಕಾಲೇಜಿಗೆ ಪ್ರವೇಶಿಸಲು ಅವಕಾಶ ಮಾಡುವಂತೆ ಕಾಲೇಜಿಗೆ ಆದೇಶ ಮಾಡಬೇಕು. ಸಂವಿಧಾನದ 14 ಮತ್ತು 25ನೇ ವಿಧಿಯಡಿ ಇಸ್ಲಾಂ ಧರ್ಮದಲ್ಲಿ ಹಿಜಾಬ್ ಧರಿಸುವುದು ಮೂಲಭೂತ ಹಕ್ಕಿನ ಭಾಗವಾಗಿದೆ ಎಂದು ವಿದ್ಯಾರ್ಥಿಯು ರೇಶಮ್ ಉಲ್ಲೇಖಿಸಿ ಹೈ ಕೋರ್ಟ್ ಗೆ ಮನವಿ ಸಲ್ಲಿಸಿದ್ದರು.
ಅರ್ಜಿಯಲ್ಲಿ ರಾಜ್ಯ ಸರ್ಕಾರ, ಉಡುಪಿಯ ಸರ್ಕಾರಿ ಪದವಿ ಪೂರ್ವ ಕಾಲೇಜು, ಉಡುಪಿ ಜಿಲ್ಲಾಧಿಕಾರಿ ಮತ್ತು ಪದವಿ ಪೂರ್ವ ಶಿಕ್ಷಣ ಮಂಡಳಿಯ ನಿರ್ದೇಶಕರನ್ನು ಪ್ರತಿವಾದಿಗಳನ್ನಾಗಿಸಲಾಗಿತ್ತು.
ಈ ಪ್ರಕರಣದ ಮನವಿ ವಿಚಾರಣೆಯನ್ನು ಬುಧವಾರ ಕೈಗೆತ್ತಿಕೊಂಡ ಪೀಠ ನ್ಯಾ. ಕೃಷ್ಣ ಎಸ್. ದೀಕ್ಷಿತ್ ನೇತೃತ್ವದ ಏಕಸದಸ್ಯ ಪೀಠದ ಮುಂದೆ ಸರ್ಕಾರದ ಪರವಾಗಿ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರು ಪ್ರಕರಣದ ಸಂಬಂಧ ವಾದಿಸಲು ಬಯಸಿದ್ದರು. ಸಂಬಂಧಿತ ಪ್ರಕರಣವನ್ನು ಒಟ್ಟಾಗಿ ಮುಂದಿನ ವಿಚಾರಣೆಗೆ ನಿಗದಿಪಡಿಸಲು ಸೂಚಿಸಿ, ಏಕಸದಸ್ಯ ಪೀಠ ಮಂಗಳವಾರಕ್ಕೆ (ಫೆಬ್ರವರಿ 8) ಪ್ರಕರಣದ ವಿಚಾರಣೆಯನ್ನು ಮುಂದೂಡಿದೆ.