24 ವರ್ಷಗಳ ಬಳಿಕ ಕಾಮನ್‌ವೆಲ್ತ್ ಗೇಮ್ಸ್‌ಗೆ ಮಹಿಳಾ ಕ್ರಿಕೆಟ್ ತಂಡಕ್ಕೆ ಅನುಮತಿ

ಬರ್ಮಿಂಗ್ ಹ್ಯಾಮ್: 24 ವರ್ಷಗಳ ಸುದೀರ್ಘ ವಿರಾಮದ ನಂತರ ಕಾಮನ್‌ವೆಲ್ತ್ ಗೇಮ್ಸ್‌ಗೆ ಕ್ರಿಕೆಟ್ ಮರು ಪ್ರವೇಶ ಮಾಡಿದೆ.
ಈ ವರ್ಷ ಜೂನ್‌ನಲ್ಲಿ ಬರ್ಮಿಂಗ್ ಹ್ಯಾಮ್(ಇಂಗ್ಲೆಂಡ್) ನಲ್ಲಿ ನಡೆಯಲಿರುವ 22ನೇ ಆವೃತ್ತಿಯಲ್ಲಿ ಕ್ರಿಕೆಟ್ ಅನ್ನು ಸೇರಿಸಲಾಗಿದೆ. ಆದರೆ ಈ ಬಾರಿ ಮಹಿಳಾ ಕ್ರಿಕೆಟ್ ಗೆ ಮಾತ್ರ ಕಾಮನ್ ವೆಲ್ತ್ ಗೇಮ್ಸ್ ಫೆಡರೇಷನ್(ಸಿಜಿಎಫ್) ಅನುಮತಿ ನೀಡಿದೆ.
ಐಸಿಸಿ ಒಟ್ಟು ಎಂಟು ತಂಡಗಳಿಗೆ(ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್, ಪಾಕಿಸ್ತಾನ, ಬಾರ್ಬಡೋಸ್, ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ) ಟಿ20 ಮಾದರಿಯಲ್ಲಿ ಭಾಗವಹಿಸಲು ಅವಕಾಶ ನೀಡಿದೆ, ಇದು ಲೀಗ್-ಕಮ್-ನಾಕೌಟ್ ಮಾದರಿಯಲ್ಲಿ ನಡೆಯಲಿದೆ.
ಪಂದ್ಯಗಳು ಜುಲೈ 29 ರಂದು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದಿಂದ ಪ್ರಾರಂಭವಾಗುತ್ತವೆ ಮತ್ತು ಆಗಸ್ಟ್ 7 ರಂದು ಗೋಲ್ಡ್ ಮೆಡಲ್ ಪಂದ್ಯದೊಂದಿಗೆ ಕೊನೆಗೊಳ್ಳುತ್ತವೆ. ಇದೇ ವಿಚಾರವಾಗಿ ಐಸಿಸಿ ಮತ್ತು ಸಿಜಿಎಫ್ ಮಂಗಳವಾರ ಜಂಟಿ ಹೇಳಿಕೆ ನೀಡಿವೆ.
1998ರಲ್ಲಿ (ಮಲೇಷ್ಯಾ) ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಕೊನೆಯ ಬಾರಿ ಕ್ರಿಕೆಟ್(50 ಓವರ್‌ಗಳ ಸ್ವರೂಪ) ನಡೆದಿತ್ತು. ಶಾನ್ ಪೊಲಾಕ್ ನೇತೃತ್ವದ ದಕ್ಷಿಣ ಆಫ್ರಿಕಾದ ಪುರುಷರ ತಂಡ ಅಂದು ಸ್ಟೀವ್ ವಾ ನಾಯಕತ್ವದ ಆಸ್ಟ್ರೇಲಿಯಾ ವಿರುದ್ಧ ಜಯಗಳಿಸಿ ಚಿನ್ನದ ಪದಕವನ್ನು ಗೆದ್ದುಕೊಂಡಿತು. ಇದೇ ವೇಳೆ ಜುಲೈ 28ರಿಂದ ಆಗಸ್ಟ್ 8ರವರೆಗೆ ನಡೆಯಲಿರುವ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ 72 ದೇಶಗಳ 4,500 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.