ಬೇಲೂರು ರಥೋತ್ಸವ: ಚನ್ನಕೇಶವನ ಭಕ್ತಿಯಲ್ಲಿ ಮಿಂದೆದ್ದ ಜನ
ಹಾಸನ: ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳ ಜನರು ದೊಡ್ಡ ಹಬ್ಬ ಎಂಬಂತೆ ಪಾಲ್ಗೊಳುತ್ತಾರೆ.
ಅಲಂಕಾರಗೊಂಡಿದ್ದ ರಥಕ್ಕೆ ಬುಧವಾರ ರಾತ್ರಿ ಕಳಸಾರೋಹಣ ಮಾಡಿ ರಥವನ್ನು ಸಿದ್ದಗೊಳಿಸಲಾಗಿತ್ತು. ಗುರುವಾರ ಬೆಳಿಗ್ಗೆ ರಥನಿರೀಕ್ಷೆ, ಸಂಪ್ರೋಕ್ಷಣೆ, ಮಂಗಳಾರತಿ ಪೂಜೆಗಳನ್ನು ನಡೆಸಲಾಯಿತು. ರಥದ ಎದುರು ಗೊನೆ ಇರುವ ಬಾಳೆಕಂಬವನ್ನು ನೆಟ್ಟು, ಕಡಿಯುವ ಮೂಲಕ ರಥ ಬಲಿ ನಡೆಸಲಾಯಿತು.
ದೇಗುಲದ ನವರಂಗದಲ್ಲಿ ಪ್ರಧಾನ ಆರ್ಚಕ ಶ್ರೀನಿವಾಸ್ ಭಟ್ಟರು, ಯಾತ್ರಾದಾನ ಪೂಜೆ ಮಾಡಿದರು. ನಂತರ ಮಹಾಲಕ್ಷ್ಮಿ ಹಾಗೂ ಭೂದೇವಿ ಜೊತೆಗಿರುವ ಚನ್ನಕೇಶವನ ಉತ್ಸವ ಮೂರ್ತಿಯನ್ನು ದೇಗುಲದ ಗೋಪುರದ ದ್ವಾರದಿಂದ ಹೊರ ತಂದು, ದೇಗುಲದ ಅಷ್ಟ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ದೇಗುಲದ ಮುಂಭಾಗದಲ್ಲಿರುವ ಭಾವಿಕಟ್ಟೆ ಸಮೀಪ ತಳಿರು, ತೋರಣಗಳಿಂದ ಅಲಂಕರಿಸಿದ್ದ ಕೇಸರಿ ಮಂಟಪದಲ್ಲಿ ಉತ್ಸವ ಮೂರ್ತಿ ಕುಳ್ಳಿರಿಸಿ, ವಿಶೇಷ ಪೂಜೆ ಸಲ್ಲಿಸಲಾಯಿತು.
ನಂತರ ಚನ್ನಕೇಶವಸ್ವಾಮಿ ಉತ್ಸವ ಮೂರ್ತಿಯನ್ನು ರಥದ ಸುತ್ತ ಮೂರು ಸುತ್ತು ಪ್ರದಕ್ಷಿಣೆ ಹಾಕಿ, ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಆಕಾಶದಲ್ಲಿ ಗರುಡ ಪಕ್ಷಿ ಒಂದು ಸುತ್ತು ಹಾಕುತ್ತಿದ್ದಂತೆಯೇ ಬೆಳಿಗ್ಗೆ10.30 ರಿಂದ 11 ಗಂಟೆಯೊಳಗೆ ಸಲ್ಲುವ ಮಿಥುನ ಲಗ್ನದಲ್ಲಿ ರಥೋತ್ಸವ ನಡೆಯಿತು.
ಭಕ್ತರು ಗೋವಿಂದ ನಾಮಸ್ಮರಣೆ ಮಾಡಿ ಘೋಷಣೆ ಕೂಗಿದರು. ರಥವನ್ನು ಮುಂದೆ ಎಳೆಯುತಿದ್ದಂತೆ ಭಕ್ತರು, ಭಕ್ತಿಯಿಂದ ಬಾಳೇಹಣ್ಣು, ಮೆಣಸಿನಕಾಳು ಹಾಗೂ ಧವನವನ್ನು ಅರ್ಪಿಸಿದರು. ಚನ್ನಕೇಶವಸ್ವಾಮಿ ದೇಗುಲವು ವಾಸ್ತುಶಿಲ್ಪಕ್ಕೆ ಮಾತ್ರ ಸೀಮಿತವಾಗಿರದೇ ಕಲೆ, ಸಂಸ್ಕೃತಿಯ ಪ್ರತಿಬಿಂಬವಾಗಿದೆ. ಸಾಕಷ್ಟು ಜನರ ಶ್ರದ್ಧಾ ಭಕ್ತಿಯ ಕೇಂದ್ರವಾಗಿದ್ದು, ವಿಶೇಷವಾಗಿ ಜಾತ್ರೆ ಹಾಗೂ ರಥೋತ್ಸವದ ಸಂದರ್ಭದಲ್ಲಿ ಚನ್ನಕೇಶವ (ವಿಷ್ಣುವಿನ) ಭಕ್ತರು ಭಕ್ತಿಯ ಪರಾಕಾಷ್ಠೆಯಲ್ಲಿ ಮಿಂದೇಳುತ್ತಾರೆ.




