December 15, 2025

ಮಹಿಳೆಯರ ಏಷ್ಯಾಕಪ್ ಹಾಕಿ ಟೂರ್ನಿ:
ಕಂಚಿನ ಪದಕ ಗೆದ್ದುಕೊಂಡ ಭಾರತ

0
1_61f4b9b51ea5e.jpeg

ಮಸ್ಕತ್‌: ಚೀನಾವನ್ನು ಏಕಪಕ್ಷೀಯವಾದ ಎರಡು ಗೋಲುಗಳಿಂದ ಮಣಿಸಿದ ಭಾರತ ತಂಡ ಮಹಿಳೆಯರ ಏಷ್ಯಾಕಪ್ ಹಾಕಿ ಟೂರ್ನಿಯಲ್ಲಿ ಕಂಚಿನ ಪದಕ ಗೆದ್ದುಕೊಂಡಿತು. ಮೂರು ಹಾಗೂ ನಾಲ್ಕನೇ ಸ್ಥಾನ ನಿರ್ಣಯಿಸಲು ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಶರ್ಮಿಳಾ ದೇವಿ ಮತ್ತು ಗುರ್ಜಿತ್ ಕೌರ್ ಭಾರತಕ್ಕೆ ಗೋಲು ತಂದುಕೊಟ್ಟರು. ಕಳೆದ ಬಾರಿ ಭಾರತ ಚಾಂಪಿಯನ್ ಆಗಿತ್ತು.

ಸೆಮಿಫೈನಲ್‌ನಲ್ಲಿ ಕೊರಿಯಾ ಎದುರು ಸೋತಿದ್ದ ಭಾರತ ಆ ನಿರಾಸೆಯನ್ನು ಮರೆತು ಈ ಪಂದ್ಯದಲ್ಲಿ ಆಡಿತು. ಮೊದಲ ಆರಂಭದಿಂದಲೇ ಆಕ್ರಮಣಕ್ಕೆ ಇಳಿದ ತಂಡ ಮೊದಲ ಎರಡು ಕ್ವಾರ್ಟರ್‌ಗಳಲ್ಲಿ ಪೂರ್ಣ ಆಧಿಪತ್ಯ ಸ್ಥಾಪಿಸಿತು. ಹೀಗಾಗಿ ಮೊದಲಾರ್ಧದ ಮುಕ್ತಾಯಕ್ಕೆ ತಂಡ ಎರಡು ಗೋಲುಗಳ ಮುನ್ನಡೆ ಗಳಿಸಿತು. ಆದರೆ ದ್ವಿತೀಯಾರ್ಧದಲ್ಲಿ ಮುನ್ನಡೆಯನ್ನು ಹೆಚ್ಚಿಸುವ ಆಸೆಗೆ ಚೀನಾ ತಡೆಯೊಡ್ಡಿತು.

ಆರಂಭದಲ್ಲೇ ಭಾರತಕ್ಕೆ ಪೆನಾಲ್ಟಿ ಕಾರ್ನರ್‌ಗಳು ಲಭಿಸತೊಡಗಿದವು. 13ನೇ ನಿಮಿಷದಲ್ಲಿ ಗುರ್ಜಿತ್ ಕೌರ್‌ ಅವರ ಫ್ಲಿಕ್‌ ಚೀನಾ ಡಿಫೆಂಡರ್‌ಗಳ ಸ್ಟಿಕ್‌ಗೆ ಬಡಿದು ವಾಪಸ್ ಬಂತು. ಶರ್ಮಿಳಾ ದೇವಿ ಚೆಂಡನ್ನು ನಿಯಂತ್ರಿಸಿ ವಾಪಸ್ ಗುರಿಯತ್ತ ತಳ್ಳಿದರು. ಈ ಮೂಲಕ ತಂಡಕ್ಕೆ ಮುನ್ನಡೆ ಲಭಿಸಿತು.

ದ್ವಿತೀಯ ಕ್ವಾರ್ಟರ್‌ನಲ್ಲೂ ಭಾರತದ ಪ್ರಾಬಲ್ಯ ಮುಂದುವರಿಯಿತು. ಸತತ ಆಕ್ರಮಣ ನಡೆಸಿದ ತಂಡ ಎದುರಾಳಿಗಳ ರಕ್ಷಣಾ ವಿಭಾಗದಲ್ಲಿ ಆತಂಕ ಸೃಷ್ಟಿಸಿತು. ಇದರ ಪರಿಣಾಮ 19ನೇ ನಿಮಿಷದಲ್ಲಿ ಪೆನಾಲ್ಟಿ ಅವಕಾಶ ಲಭಿಸಿತು. ಗುರ್ಜಿತ್ ಕೌರ್ ಅವರು ಮೋಹಕ್ ಡ್ರ್ಯಾಗ್ ಫ್ಲಿಕ್ ಮೂಲಕ ಚೆಂಡನ್ನು ಗುರಿ ಮುಟ್ಟಿಸಿದರು.

ಮರುಕ್ಷಣದಲ್ಲೇ ಚೀನಾಗೂ ಪೆನಾಲ್ಟಿ ಕಾರ್ನರ್ ಅವಕಾಶ ಲಭಿಸಿತು. ಆದರೆ ಭಾರತ ತಂಡದ ನಾಯಕಿ ಮತ್ತು ಗೋಲ್‌ಕೀಪರ್ ಸವಿತಾ ಪೂನಿಯಾ ಅವರು ಚೆಂಡು ಗುರಿ ಮುಟ್ಟಲು ಬಿಡಲಿಲ್ಲ. ದ್ವಿತೀಯಾರ್ಧದಲ್ಲಿ ಮುನ್ನಡೆಗಾಗಿ ಚೀನಾ ಪ್ರಬಲ ಹೋರಾಟ ನಡೆಸಿತು. ಆದರೆ ಫಲ ಕಾಣಲಿಲ್ಲ. ಪಂದ್ಯ ಮುಗಿಯಲು 10 ನಿಮಿಷ ಇದ್ದಾಗ ಚೀನಾಗೆ ಪೆನಾಲ್ಟಿ ಅವಕಾಶ ಲಭಿಸಿತ್ತು. ಆದರೆ ಭಾರತದ ಡಿಫೆಂಡರ್‌ಗಳು ಭದ್ರ ಕೋಟೆಯಂತೆ ನಿಂತು ಚೆಂಡನ್ನು ತಡೆದರು.

Leave a Reply

Your email address will not be published. Required fields are marked *

error: Content is protected !!