ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಓವರ್ ನೀಡಿದ ಜೋಫ್ರಾ ಆರ್ಚರ್: 4 ಓವರ್ನಲ್ಲಿ ಕೊಟ್ಟ ರನ್ ಎಷ್ಟು ಗೊತ್ತೇ?

ಹೈದರಾಬಾದ್: ಐಪಿಎಲ್ ಟೂರ್ನಿಯ ಸನ್ ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ತಾನ ರಾಯಲ್ಸ್ ನಡುವಿನ ಪಂದ್ಯದಲ್ಲಿ ರನ್ ಸುರಿಮಳೆಯೇ ಸುರಿದಿದ್ದು, ಬೌಲರ್ ಗಳು ವಿಕೆಟ್ ಪಡೆಯಲು ಅಲ್ಲ ರನ್ ವೇಗಕ್ಕೆ ಕಡಿವಾಣ ಹಾಕಲು ಪರದಾಡಿದ್ದಾರೆ.
ಹೈದರಾಬಾದ್ ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಸನ್ ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ತಾನ ರಾಯಲ್ಸ್ ನಡುವಿನ ಪಂದ್ಯದಲ್ಲಿ ರನ್ ಗಳ ಸುರಿಮಳೆಯೇ ಹರಿದುಬಂದಿದ್ದು, ಆ ಮೂಲಕ ಈ ಪಂದ್ಯ ಗರಿಷ್ಟ ರನ್ ಗಳು ಬಂದ 2ನೇ ಪಂದ್ಯ ಎಂಬ ದಾಖಲೆಗೆ ಪಾತ್ರವಾಗಿದೆ. ಅಂತೆಯೇ ಈ ಪಂದ್ಯದಲ್ಲಿ ಉಭಯ ತಂಡಗಳ ಬೌಲರ್ ಗಳು ಅಕ್ಷರಶಃ ಬ್ಯಾಟ್ಸಮನ್ ಗಳಿಂದ ದಂಡನೆಗೆ ಒಳಗಾದರು.
ಈ ಪಂದ್ಯದಲ್ಲಿ ಬರೊಬ್ಬರಿ 76 ರನ್ ಕೊಟ್ಟ ರಾಜಸ್ತಾನ ಜೋಫ್ರಾ ಆರ್ಚರ್ ಐಪಿಎಲ್ ಇತಿಹಾಸದಲ್ಲೇ ಒಂದು ಇನ್ನಿಂಗ್ಸ್ ನಲ್ಲಿ ಗರಿಷ್ಟ ರನ್ ನೀಡಿದ ಮೊದಲ ಬೌಲರ್ ಎನಿಸಿಕೊಂಡಿದ್ದಾರೆ. ಇಂದಿನ ಪಂದ್ಯದಲ್ಲಿ 4 ಓವರ್ ಎಸೆದ ಜೋಫ್ರಾ ಆರ್ಚರ್ ಬರೊಬ್ಬರಿ 19.00 ಸರಾಸರಿಯಲ್ಲಿ 76 ರನ್ ನೀಡಿದ್ದಾರೆ. ಆ ಮೂಲಕ ಐಪಿಎಲ್ ಇತಿಹಾಸದ ದುಬಾರಿ ಬೌಲರ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮೊದಲು 2024ರಲ್ಲಿ ಡೆಲ್ಲಿ ವಿರುದ್ಧ ಗುಜರಾತ್ ಟೈಟನ್ಸ್ ತಂಡದ ಮೋಹಿತ್ ಶರ್ಮಾ 4 ಓವರ್ ನಲ್ಲಿ 73 ರನ್ ನೀಡಿದ್ದರು.