ಉಡುಪಿಯಲ್ಲಿ ಶಾಸಕರ ಆದೇಶಕ್ಕೆ ಡೋಂಟ್ ಕೇರ್: ಹಿಜಾಬ್ ಧರಿಸಿಯೇ ಕ್ಯಾಂಪಸ್ಸಿಗೆ ಬಂದ ವಿದ್ಯಾರ್ಥಿನಿಯರು

ಉಡುಪಿ: ರಾಷ್ಟ್ರ ಮಟ್ಟದಲ್ಲಿ ಭಾರೀ ವಿವಾದ ಸೃಷ್ಟಿಸಿ, ನಾಡಿನ ಗಮನ ಸೆಳೆದಿದ್ದ ಉಡುಪಿ ಸರಕಾರಿ ಪದವಿ ಪೂರ್ವ ಕಾಲೇಜಿನ ಹಿಜಾಬ್ ವಿಚಾರ ದಿನಕ್ಕೊಂದು ತಿರುವು ಪಡೆಯುತ್ತಿದೆ. ತಿಂಗಳ ಬಳಿಕವೂ ವಿದ್ಯಾರ್ಥಿಗಳ ಹಠ ಕಡಿಮೆ ಮಾಡಿದ್ದಂತೆ ಕಾಣುತ್ತಿಲ್ಲ. ಹಿಜಾಬ್ ತೊಟ್ಟು ಬಂದರೆ ಕಾಲೇಜು ಆವರಣಕ್ಕೂ ಪ್ರವೇಶ ನಿರ್ಬಂಧ ನಿರ್ಣಯದ ಬಳಿಕವೂ ಆರು ವಿದ್ಯಾರ್ಥಿನಿಯರು ಇಂದು ಹಿಜಾಬ್ ಧರಿಸಿಯೇ ಕಾಲೇಜಿಗೆ ಆಗಮಿಸಿ ಶಾಸಕ ರಘುಪತಿ ಭಟ್ ಅವರ ಸೂಚನೆಗೆ ಸಡ್ಡು ಹೊಡೆದಿದ್ದಾರೆ.
ನಮ್ಮದು ಸರಕಾರಿ ಕಾಲೇಜು. ಇಲ್ಲಿಗೆ ಬರಬೇಡಿ ಎನ್ನುವುದಕ್ಕೆ ಶಾಸಕರಿಗೆ ಯಾವ ಹಕ್ಕಿಲ್ಲ ಎಂದು ಉಡುಪಿ ವಿದ್ಯಾರ್ಥಿನಿಯರು ಪೊಲೀಸ್ ಭದ್ರತೆಯ ನಡುವೆಯೂ ಕಾಲೇಜು ಆವರಣ ಪ್ರವೇಶಿಸಿದ್ದಾರೆ.
ಆದರೆ ಹಿಜಾಬ್ ಕಳಚಿ ತರಗತಿಗೆ ತೆರಳುವುದಕ್ಕೆ ಮನಸ್ಸು ಮಾಡದೇ ಇರುವ ಹಿನ್ನೆಲೆಯಲ್ಲಿ ಮಂಗಳವಾರವೂ ಕೂಡಾ ಕಾಲೇಜಿನ ಹೊರಗಡೆಯೇ ಕುಳಿತುಕೊಂಡರು.

ಸರಕಾರಿ ಕಾಲೇಜಿನಲ್ಲಿ ನಡೆಯುತ್ತಿರುವ ಹಿಜಾಬ್ ಧಾರಣೆ ವಿವಾದಕ್ಕೆ ಸಂಬಂಧಿಸಿ ಈಗಾಗಲೇ ಹೈಕೋರ್ಟ್ ಕದ ತಟ್ಟಿರುವ ವಿದ್ಯಾರ್ಥಿನಿಯರು ಮಂಗಳವಾರ ಟ್ವೀಟ್ ಮೂಲಕ ಗಮನ ಸೆಳೆದು ತಮ್ಮ ಹಕ್ಕನ್ನು ನೀಡುವಂತೆ ಕೇಳಿದ್ದಾರೆ.
ಈ ಸಮಸ್ಯೆ ಪರಿಹಾರಕ್ಕೆ ನಡೆದ ಎಲ್ಲಾ ಪ್ರಯತ್ನಗಳು ವಿಫಲವಾಗಿದೆ. ಶಾಸಕ ರಘಪತಿ ಭಟ್ ಆದೇಶ ಬಗ್ಗೆ ಮಾತನಾಡಿದ ವಿಧ್ಯಾರ್ಥಿನಿ ಇದು ಸರಕಾರಿ ಕಾಲೇಜು. ಎಂಎಲ್‌ಎ ಗೆ ಕಾಲೇಜಿಗೆ ಬರಬೇಡಿ ಎಂದು ಹೇಳುವ ಅಧಿಕಾರವೇ ಇಲ್ಲ.
ಆವರಣದಿಂದ ಹೊರಗಡೆ ಹಾಕುತ್ತೇವೆ, ಶಿಸ್ತು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಬೆದರಿಸುತ್ತಿದ್ದಾರೆ. ನಾವು ಯಾವ ಅಪರಾಧವೂ ಮಾಡಿಲ್ಲ.
ಸಂವಿಧಾನ ಕೊಟ್ಟ ಹಕ್ಕನ್ನು ಕೇಳುತ್ತಿದ್ದೇವೆ ಎಂದರು. ಪೋಷಕರು ನಮ್ಮ ಬೆಂಬಲಕ್ಕಿದ್ದಾರೆ. ಹಿಜಾಬ್ ಹಾಕುವುದಕ್ಕೆ ಅವಕಾಶ ನೀಡುವಂತೆ ಒತ್ತಾಯ ಮಾಡಿದ್ದಾರೆ. ಕಾಲೇಜು, ಸರಕಾರ ಮಾತ್ರ ನಮ್ಮ ಮಾತು ಕೇಳುತ್ತಿಲ್ಲ. ಸಮುದಾಯದ ಎಲ್ಲಾ ಮುಖಂಡರು ಒಂದೇ ರೀತಿ ಇರುವುದಿಲ್ಲ ಅಲ್ಲವೇ? ಸ್ವಲ್ಪ ಮಂದಿ ನಮಗೆ ಬೆಂಬಲ ಕೊಡುತ್ತಾರೆ.
ಇನ್ನೂ ಸ್ವಲ್ಪ ಮಂದಿ ವಿರೋಧಿಸುತ್ತಾರೆ. ನಮಗೆ ಯಾರ ಬೆಂಬಲ ಬೇಕೆಂದು ಕೇಳುತ್ತಿಲ್ಲ. ನಮಗೆ ಹಿಜಾಬ್ ಹಾಕುವುದಕ್ಕೆ ಅವಕಾಶ ನೀಡಬೇಕೆಂದರು.ನಾವು ಡಿಸಿ ಅವರಿಂದ ಹಿಡಿದು ಎಲ್ಲಾ ಅಧಿಕಾರಿಗಳ ಜತೆಗೂ ಮಾತನಾಡಿದ್ದೇವೆ.
ಪ್ರಾಂಶುಪಾಲರಿಗೆ ಸಾಕಷ್ಟು ಮನವಿ ಕೊಟ್ಟಿದ್ದೇವೆ. ಯಾವುದೇ ಪ್ರಯೋಜನ ಆಗಿಲ್ಲ. ಹೀಗಾಗಿ ನಾವು ವಕೀಲರು ಮೂಲಕ ಕೋರ್ಟ್‌ಗೆ ಹೋಗಿದ್ದೇವೆ. ಇದು ಸಂವಿಧಾನ ಬದ್ಧ ಹಕ್ಕು ನಾವು ಹಿಜಬ್ ಧರಿಸಿಯೇ ತರಗತಿಗೆ ಹೋಗುತ್ತೆವೆ ಎಂದಿದ್ದಾರೆ’