ಹಿರಿಯ ಕಾಂಗ್ರೆಸ್ ಮುಂದಾಳು ಬಿ.ಜನಾರ್ದನ ಪೂಜಾರಿ ಮನೆಗೆ ಭೇಟಿ ನೀಡಿ, ಆಶೀರ್ವಾದ ಪಡೆದ
ಯು.ಟಿ ಖಾದರ್
ಬಂಟ್ವಾಳ: ಕರ್ನಾಟಕ ವಿಧಾನಸಭೆಯ ಪ್ರತಿಪಕ್ಷದ ಉಪನಾಯಕನನ್ನಾಗಿ ಆಯ್ಕೆ ಮಾಡಿದ ಎಲ್ಲರಿಗೂ ಕೃತಜ್ಞತೆಯನ್ನು ಅರ್ಪಿಸುತ್ತಾ, ನೀಡಿದ ಜವಾಬ್ದಾರಿಯನ್ನು ಪ್ರಮಾಣಿಕತೆಯಿಂದ ನಿಭಾಯಿಸಿ ಇಡೀ ರಾಜ್ಯ ಹಾಗೂ ಕ್ಷೇತ್ರದ ಜನರಿಗೆ ಗೌರವ ತರುವ ಕೆಲಸ ಮಾಡುತ್ತೇವೆ. ಈ ಜವಾಬ್ದಾರಿ ತನ್ನ ಕ್ಷೇತ್ರದ ಮತದಾರರಿಗೆ ಸಂದ ಗೌರವಾಗಿದೆ ಎಂದು ವಿಧಾನಸಭಾ ವಿಪಕ್ಷ ಉಪನಾಯಕ, ಶಾಸಕ ಯು.ಟಿ.ಖಾದರ್ ಹೇಳಿದರು.
ಅವರು ಬಂಟ್ವಾಳದಲ್ಲಿ ಹಿರಿಯ ಕಾಂಗ್ರೆಸ್ ಮುಂದಾಳು ಬಿ.ಜನಾರ್ದನ ಪೂಜಾರಿಯವರ ಆಶೀರ್ವಾದ ಪಡೆದು ಬಳಿಕ ಸುದ್ದಿಗಾರರ ಜತೆ ಮಾತನಾಡಿದರು. ತನ್ನ ಆಯ್ಕೆಗೆ ಕಾರಣರಾದ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಕೆ.ಸಿ.ವೇಣುಗೋಪಾಲ್, ರಣದೀಪ್ ಸುರ್ಜೇವಾಲಾ, ಮಲ್ಲಿಕಾರ್ಜುನ ಖರ್ಗೆ, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಸೇರಿದಂತೆ ಎಲ್ಲಾ ಹಿರಿಯ-ಕಿರಿಯ ನಾಯಕರಿಗೆ ಕ್ಷೇತ್ರದ ಜನರ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇವೆ. ಪಕ್ಷಕ್ಕೆ ನನ್ನಿಂದಾಗುವ ಸಹಕಾರ ನೀಡುತ್ತೇನೆ.
ತಾನು ವಿದ್ಯಾರ್ಥಿಯಾಗಿದ್ದಾಗ ಹಿರಿಯ ನಾಯಕ ಜನಾರ್ದನ ಪೂಜಾರಿಯವರು ತನ್ನನ್ನು ಮೊದಲ ಬಾರಿಗೆ ಎನ್‌ಎಸ್‌ಯುಐನ ಕಾರ್ಯದರ್ಶಿಯನ್ನಾಗಿ ಮಾಡಿದ್ದರು. ಹೀಗಾಗಿ ಅವರ ಆಶೀರ್ವಾದ ಪಡೆದಿದ್ದೇನೆ. ಜತೆಗೆ ಜಿಲ್ಲೆಯ ಎಲ್ಲಾ ಹಿರಿಯ-ಕಿರಿಯ ಮುಖಂಡರುಗಳ ಆಶೀರ್ವಾದವನ್ನು ಕೇಳುತ್ತಿದ್ದೇನೆ. ಸಿ.ಎಂ.ಇಬ್ರಾಹಿಂ ಅವರು ನಮ್ಮ ಹಿರಿಯ ನಾಯಕರಾಗಿದ್ದು, ಕಾಂಗ್ರೆಸ್ ಪಕ್ಷಕ್ಕೆ ಸಾಕಷ್ಟು ಕೊಡುಗೆ ನೀಡಿದ್ದು, ಮುಂದೆಯೂ ಕಾಂಗ್ರೆಸ್‌ನಲ್ಲೇ ಇರುತ್ತಾರೆ. ಅವರ ಕೊಡುಗೆ ಅತಿ ಅಗತ್ಯವಾಗಿದೆ. ದೇಶ-ರಾಜ್ಯದ ಜತೆಗೆ ಜನಸಾಮಾನ್ಯರಿಗೆ ವಿರೋಧವಾಗಿರುವ ಬಿಜೆಪಿ ಸರಕಾರವನ್ನು ಕಿತ್ತೊಗೆಯುವುದು ನಮ್ಮ ಪ್ರಮುಖ ಉದ್ದೇಶವಾಗಿದೆ.
ವಿಧಾನ ಪರಿಷತ್ತೇ ಬೇರೆ ವಿಧಾನಸಭೆಯೇ ಬೇರೆ, ಉಪನಾಯಕನ ಸ್ಥಾನದ ಕುರಿತು ಹಿಂದೆಯೇ ಚರ್ಚೆಯಾಗಿತ್ತು. ಅವರ ಸಿ.ಎಂ.ಇಬ್ರಾಹಿಂ ಅವರ ವಿಚಾರಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ತಾನು ಸಣ್ಣ ವಯಸ್ಸಿನಿಂದಲೂ ಕಾಂಗ್ರೆಸ್‌ನಲ್ಲಿ ಬೇರೆ ಬೇರೆ ಸ್ಥಾನಗಳನ್ನು ಅಲಂಕರಿಸಿ ಶಾಸಕನಾಗಿ, ಸಚಿವನಾಗಿ ಪ್ರಮುಖ ಇಲಾಖೆಗಳನ್ನು ಪ್ರಮಾಣಿಕನಾಗಿ ಕೆಲಸ ಮಾಡಿದ ಕಾರಣ ಈ ಸ್ಥಾನ ಲಭಿಸಿದೆ ಎಂದರು.
ಈ ಸಂದರ್ಭದಲ್ಲಿ ಜಿ.ಪಂ.ಮಾಜಿ ಸದಸ್ಯ ಉಮ್ಮರ್ ಫಾರೂಕ್ ಫರಂಗಿಪೇಟೆ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್, ಬಂಟ್ವಾಳ ಬ್ಲಾಕ್ ಅಧ್ಯಕ್ಷ ಬೇಬಿ ಕುಂದರ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ, ಪುದು ಗ್ರಾ.ಪಂ.ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಇರಾ ಗ್ರಾ.ಪಂ.ಮಾಜಿ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ, ಜಿಲ್ಲಾ ಕಾಂಗ್ರೆಸ್ ಒಬಿಸಿ ಘಟಕದ ಉಪಾಧ್ಯಕ್ಷ ದಿನೇಶ್ ಪೂಜಾರಿ, ಜಬ್ಬಾರ್ ಬೋಳಿಯಾರ್, ಮಜೀದ್ ಫರಂಗಿಪೇಟೆ, ಇಕ್ಬಾಲ್ ಸುಜೀರ್ ಮೊದಲಾದವರಿದ್ದರು. ಬಳಿಕ ಮಾಜಿ ಸಚಿವ ಬಿ.ರಮಾನಾಥ ರೈ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.