December 16, 2025

ದಾಂಡೇಲಿ: ಮೊಸಳೆಯ ವಶದಲ್ಲಿದ್ದ ಬಾಲಕನ‌ ಮೃತದೇಹ ಪತ್ತೆ

0
image_editor_output_image1028246118-1635237784168.jpg

ದಾಂಡೇಲಿ: ಕಳೆದೆರಡು ದಿನಗಳಿಂದ ವಿನಾಯಕ ನಗರದ ಕಾಳಿ ನದಿಯಲ್ಲಿ ಮೊಸಳೆಯೊಂದು ಎಳೆದುಕೊಂಡಿದ್ದ ಸ್ಥಳೀಯ ಅಲೇಡ್ ಪ್ರದೇಶದ 15 ವರ್ಷದ ಮೊಹಿನ್ ಮೆಹಮೂದ್ ಅಲಿ ಎಂಬ ಬಾಲಕನ ಮೃತದೇಹ ಮಂಗಳವಾರ ಬೆಳಿಗ್ಗೆ ಪತ್ತೆಯಾಗಿದೆ. ಭಾನುವಾರ ಮಧ್ಯಾಹ್ನ ಮೊಸಳೆಯ ಬಾಯಿಗೆ ತುತ್ತಾದ ಬಾಲಕ ಮೊಹಿನ್ ಇಂದು ಹೆಣವಾಗಿ ಪತ್ತೆಯಾಗಿದ್ದಾನೆ.

ಸ್ಥಳೀಯರು ಮೂರ್ನಾಲ್ಕು ಜಟ್ಟಿಗಳ ಮೂಲಕ ಹಾಗೂ ಹಾರ್ನಬಿಲ್, ಪ್ಲೈ ಕ್ಯಾಚರ್, ರವಿ ನಾಯಕ ಮತ್ತು ಕರೀಂ ಖತೀಬ್ ಅವರುಗಳ ರಾಪ್ಟ್ ಮೂಲಕ ಭಾನುವಾರ ಮಧ್ಯಾಹ್ನದಿಂದ ಆರಂಭಗೊಂಡ ಬಾಲಕನ ಶೋಧ ಕಾರ್ಯಾಚರಣೆ ಮಂಗಳವಾರ ಬೆಳಿಗ್ಗೆ 10.45 ರಿಂದ 11 ಗಂಟೆ ಸುಮಾರಿಗೆ ಬಾಲಕನ ಶವ ಪತ್ತೆಯಾಗುವುದರ ಮೂಲಕ ಅಂತ್ಯಗೊಂಡಿದೆ.

ಕಳೆದ ಎರಡು ದಿನಗಳಲ್ಲಿ ಬಹಳಷ್ಟು ಸತಾಯಿಸಿದ್ದ ಮೊಸಳೆ ಆಗೊಮ್ಮೆ, ಈಗೊಮ್ಮೆ ಎಂಬಂತೆ ಬಾಲಕನನ್ನು ಬಾಯಲ್ಲಿಟ್ಟುಕೊಂಡು ಕಾಣಿಸಿಕೊಂಡಿತು. ಮಂಗಳವಾರವೂ ಮೂರ್ನಾಲ್ಕು ಸಲ ಇದೇ ರೀತಿ ಬಾಲಕನನ್ನು ಬಾಯಲ್ಲಿಟ್ಟು ನೀರಲ್ಲಿ ಸಂಚರಿಸುವುದು ಕಂಡುಬಂದಿದೆ.

ಇದನ್ನು ಗಮನಿಸಿದ ರಾಪ್ಟ್ ಮತ್ತು ಜಟ್ಟಿಯಲ್ಲಿದ್ದವರು ತಾಳ್ಮೆ ವಹಿಸಿ ಕಾರ್ಯಾಚರಣೆಯನ್ನು ಶುರುವಚ್ಚಿಕೊಂಡಿದ್ದರು. ಇಂದು ಬೆಳಿಗ್ಗೆ ಹತ್ತುವರೆ ಘಂಟೆ ಸುಮಾರಿಗೆ ಎಲ್ಲ ಕಡೆಗಳಿಂದಲೂ ರಾಪ್ಟ್ ಹಾಗೂ ಜಟ್ಟಿಗಳು ಮೊಸಳೆಯನ್ನು ಸುತ್ತುವರಿದುಕೊಂಡಿದ್ದವು. ಬೆಳಿಗ್ಗೆ 10.45 ರಿಂದ 11 ಗಂಟೆ ಸುಮಾರಿಗೆ ಮೊಸಳೆಯ ಹತ್ತಿರ ಜಟ್ಟಿಯ ಮೂಲಕ ಸ್ಥಳೀಯರಾದ ಗಣೇಶ ಮತ್ತು ಮುಸ್ತಾಕ್ ಅವರುಗಳು ಧಾವಿಸಿ ಮೊಸಳೆಯ ಬಾಯಿಯಿಂದ ಬಾಲಕನ ಶವವನ್ನು ಎಳೆಯುತ್ತಲೆ ಮುಂದೆ ಸಾಗಿದರು.

ಆದಾಗ್ಯೂ ಮೊಸಳೆ ಮಾತ್ರ ಬಾಲಕನ ದೇಹವನ್ನು ಬೆನ್ನು ಬಿಡದೇ ಹಿಂಬಾಲಿಸಿತ್ತು. ಒಮ್ಮೆ ಆತಂಕದ ವಾತವರಣ ಸೃಷ್ಟಿಯಾಯಿತಾದರೂ ತಕ್ಷಣವೆ ರಾಪ್ಟ್ ಗಳು ಜಟ್ಟಿಯ ಬಳಿ ಬಂದು ಮೊಸಳೆಯನ್ನು ಅಲ್ಲಿಂದ ಓಡಿಸಿ, ಬಾಲಕನ ಶವವನ್ನು ಜಟ್ಟಿಯಿಂದ ತೆಗೆದು ರಾಪ್ಟ್ ಮೂಲಕ ತಂದು ನದಿಯ ದಡಕ್ಕೆ ಮುಟ್ಟಿಸಿದರು.

ಬಾಲಕನ ಎಡ ಕೈಯನ್ನು ಸಂಪೂರ್ಣ ತಿಂದಿರುವ ಶಂಕೆ ವ್ಯಕ್ತವಾಗಿದೆ. ಒಂದೆಡೆ ನದಿ ದಡದ ಸುತ್ತಲು ಸಾಕಷ್ಟು ಸಂಖ್ಯೆಯಲ್ಲಿ ಸಾರ್ವಜನಿಕರು ಜಮಾಯಿಸಿದ್ದರು. ಬಾಲಕನ ಶವ ದೊರೆಯುತ್ತಿದ್ದಂತೆಯೆ ಹೆತ್ತವರ ಹಾಗೂ ಸಂಬಂಧಿಗಳ ಆಕ್ರಂದನ ಮುಗಿಲು ಮುಟ್ಟಿದೆ. ನದಿಯ ದಡದತ್ತ ತಂದ ತಕ್ಷಣವೆ ನಗರದ ಸಾರ್ವಜನಿಕ ಆಸ್ಪತ್ರೆಗೆ ಶವದ ಮರಣೋತ್ತರ ಪರೀಕ್ಷೆಗೆ ಬಾಲಕನ ಮೃತ ದೇಹವನ್ನು ಕಳುಹಿಸಿಕೊಡಲಾಯ್ತು.

Leave a Reply

Your email address will not be published. Required fields are marked *

error: Content is protected !!