ಅಕ್ರಮ ಹಣ ವರ್ಗಾವಣೆ ಪ್ರಕರಣ: ಅಟ್ಲಾಸ್ ಜ್ಯುವೆಲ್ಲರಿಯಿಂದ 26.59 ಕೋಟಿ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ
ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಇಡಿ(ಜಾರಿ ನಿರ್ದೇಶನಾಲಯ) ಅಟ್ಲಾಸ್ ಜ್ಯುವೆಲ್ಲರಿ ಇಂಡಿಯಾ ಲಿಮಿಟೆಡ್ನಿಂದ 26.59 ಕೋಟಿ ರೂ. ಮೌಲ್ಯದ ಹೂಡಿಕೆ ಹಣ, ಚಿನ್ನಾಭರಣವನ್ನು ವಶಕ್ಕೆ ಪಡೆದುಕೊಂಡಿದೆ ಎಂದು ತಿಳಿದುಬಂದಿದೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ, ಅಟ್ಲಾಸ್ ಜ್ಯುವೆಲರಿ ಇಂಡಿಯಾ ಲಿಮಿಟೆಡ್’ಗೆ ಸೇರಿದ ಆಸ್ತಿಪಾಸ್ತಿಗಳ ಮೇಲೆ ಜನವರಿ 20 ಮತ್ತು 22 ರಂದು ದಾಳಿ ನಡೆಸಿದ್ದು, ದಾಳಿಯಲ್ಲಿ 26.59 ಕೋಟಿ ರೂಪಾಯಿ ಮೌಲ್ಯದ ಸ್ಥಿರ ಠೇವಣಿ, ಚಿನ್ನ, ಬೆಳ್ಳಿ ಮತ್ತು ವಜ್ರದ ಆಭರಣಗಳನ್ನು ವಶಪಡಿಸಿಕೊಂಡಿದೆ” ಎಂದು ಸೋಮವಾರ ಅಧಿಕೃತ ಪ್ರಕಟಣೆಯಲ್ಲಿ ಸಂಸ್ಥೆ ತಿಳಿಸಿದೆ.
ಅಟ್ಲಾಸ್ ಜ್ಯುವೆಲರಿ, ಎಂಎಂ ರಾಮಚಂದ್ರನ್ ಮತ್ತು ಇಂದಿರಾ ರಾಮಚಂದ್ರನ್ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಸೌತ್ ಇಂಡಿಯನ್ ಬ್ಯಾಂಕ್, ರೌಂಡ್ ಸೌತ್ ಬ್ರಾಂಚ್, ಕೇರಳ, ತ್ರಿಶೂರ್‌ಗೆ ವಂಚನೆ ಮಾಡಿದ್ದಕ್ಕಾಗಿ ತ್ರಿಶೂರ್ ಪೊಲೀಸರು ದಾಖಲಿಸಿದ ಎಫ್‌ಐಆರ್ ಆಧಾರದ ಮೇಲೆ ಇಡಿ ತನಿಖೆ ಆರಂಭಿಸಿದೆ.
ಮೋಸ ಮಾಡುವ ಉದ್ದೇಶದಿಂದ, ಯೋಜಿಸಿ ನಕಲಿ ದಾಖಲೆಗಳನ್ನು ಬ್ಯಾಂಕ್‌ಗೆ ಸಲ್ಲಿಸಿದ್ದರು. ಮಾರ್ಚ್ 21, 2013 ಮತ್ತು ಸೆಪ್ಟೆಂಬರ್ 26, 2018 ರಂದು ರೂ 242.40 ಕೋಟಿ ಮೌಲ್ಯದ ಸಾಲವನ್ನು ಪಡೆದುಕೊಂಡು, ಹಣವನ್ನು ಮರುಪಾವತಿ ಮಾಡಿರಲಿಲ್ಲ” ಎಂದು ಇಡಿ ಹೇಳಿದೆ.
“ರಾಮಚಂದ್ರನ್ ಅವರು ನವದೆಹಲಿಯ ಅಟ್ಲಾಸ್ ಜ್ಯುವೆಲರಿ ಇಂಡಿಯಾ ಲಿಮಿಟೆಡ್‌ನ ಈಕ್ವಿಟಿ ಷೇರುಗಳನ್ನು ಖರೀದಿಸಲು 100 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿದ್ದು, ನವದೆಹಲಿಯ ಆಕ್ಸಿಸ್ ಬ್ಯಾಂಕ್‌ನ ಎಸ್ಕ್ರೊ ಖಾತೆಗೆ ಇನ್ನೂ 14 ಕೋಟಿ ರೂಪಾಯಿಗಳನ್ನು ವರ್ಗಾಯಿಸಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ” ಎಂದು ಸಂಸ್ಥೆ ಮಾಹಿತಿ ನೀಡಿದೆ.





