ಬಡಾವಣೆ ಅಭಿವೃದ್ಧಿ ಕಟ್ಟಡಗಳ ನೆಲಸಮ ಕಾರ್ಯಾಚರಣೆಗೆ ಅಡ್ಡಿ: ಶಾಸಕ ಸೇರಿದಂತೆ 30ಕ್ಕೂ ಅಧಿಕ ಮಂದಿ ಪೊಲೀಸ್ ವಶಕ್ಕೆ
ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಡಾ.ಕೆ.ಶಿವರಾಮ ಕಾರಂತ ಬಡಾವಣೆ ಅಭಿವೃದ್ಧಿ ಪಡಿಸಲು ಪ್ರಾಥಮಿಕ ಅಧಿಸೂಚನೆ ಹೊರಡಿಸಿರುವ ಸ್ಥಳದಲ್ಲಿ 2018ರ ಬಳಿಕ ನಿರ್ಮಿಸಿರುವ ಕಟ್ಟಡಗಳನ್ನು ತೆರವುಗೊಳಿಸುವ ಕಾರ್ಯಾಚರಣೆಗೆ ಅಡ್ಡಿಪಡಿಸಿ ಪ್ರತಿಭಟನೆ ನಡೆಸಿದ ಸ್ಥಳೀಯ ಶಾಸಕ ಆರ್.ಮಂಜುನಾಥ್ ಸೇರಿದಂತೆ 30ಕ್ಕೂ ಅಧಿಕ ಮಂದಿಯನ್ನು ಪೊಲೀಸರು ಸೋಮಶೆಟ್ಟಿಹಳ್ಳಿಯಲ್ಲಿ ಸೋಮವಾರ ವಶಕ್ಕೆ ಪಡೆದಿದ್ದಾರೆ.
ಈ ಬಡಾವಣೆಗೆ ಗೊತ್ತುಪಡಿಸಿದ ಜಾಗದಲ್ಲಿ 2018ರ ಆಗಸ್ಟ್ ಬಳಿಕ ನಿರ್ಮಾಣವಾಗಿರುವ ಕಟ್ಟಡಗಳನ್ನು ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆ ತೆರವುಗೊಳಿಸುತ್ತಿದ್ದೇವೆ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.
ಸೋಮಶೆಟ್ಟಿಹಳ್ಳಿ ಹಾಗೂ ಗಾಣಿಗರಹಳ್ಳಿಯಲ್ಲಿ ಒಟ್ಟು 142 ಕಟ್ಟಡಗಳು 2018ರ ಬಳಿಕ ನಿರ್ಮಾಣವಾಗಿವೆ ಎಂದು ಬಿಡಿಎ ಅಧಿಕಾರಿಗಳು ಗುರುತಿಸಿದ್ದು, ಇವುಗಳನ್ನು ಕೆಡವಲು ನಿರ್ಧರಿಸಿದ್ದರು.
ಕಟ್ಟಡ ತೆರವುಗೊಳಿಸಲು ಬಿಡಿಎ ಅಧಿಕಾರಿಗಳು ಸೋಮವಾರ ಬೆಳಿಗ್ಗೆ 10ಕ್ಕೂ ಅಧಿಕ ಜೆಸಿಬಿ ಹಾಗೂ 10 ಅಧಿಕ ಹಿಟಾಚಿ ಯಂತ್ರಗಳೊಂದಿಗೆ ಹಾಗೂ ಪೊಲೀಸ್ ಭದ್ರತೆಯೊಂದಿಗೆ ಸ್ಥಳಕ್ಕೆ ತೆರಳಿದ್ದರು. ಕಟ್ಟಡಗಳನ್ನು ಒಡೆಯುವುದಕ್ಕೆ ಸ್ಥಳೀಯರು ಅಡ್ಡಿಪಡಿಸಿದರು.
ದಾಸರಹಳ್ಳಿ ಕ್ಷೇತ್ರದ ಶಾಸಕ ಮಂಜುನಾಥ್ ಅವರೂ ಸ್ಥಳಕ್ಕೆ ಧಾವಿಸಿ ಕಟ್ಟಡಗಳನ್ನು ಕೆಡಹುವುದನ್ನು ಸ್ಥಗಿತಗೊಳಿಸುವಂತೆ ಅಧಿಕಾರಿಗಳನ್ನು ಕೋರಿದರು. ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ತೆರವು ಕಾರ್ಯವನ್ನು ಕೈಗೊಂಡಿದ್ದೇವೆ. ಇದಕ್ಕೆ ಅಡ್ಡಿಪಡಿಸಬಾರದು ಎಂದು ಅಧಿಕಾರಿಗಳು ಕೋರಿದರು.




