March 20, 2026

ಕರ್ನಾಟಕದಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ನಡೆಯುವ ಕ್ರಮಗಳ ಬಗ್ಗೆ ಜಮಾಅತೆ ಇಸ್ಲಾಮಿ ಹಿಂದ್ ನಿಂದ ಪತ್ರಿಕಾಗೋಷ್ಠಿ

0
IMG-20220124-WA0007.jpg

ಬೆಂಗಳೂರು: ಕ್ವೀನ್ಸ್ ರಸ್ತೆಯ ಬಿಫ್ಟ್ ನಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಜಮಾಅತೆ ಇಸ್ಲಾಮಿ ಹಿಂದ್, ಕರ್ನಾಟಕ ಅಧ್ಯಕ್ಷ ಡಾ. ಮುಹಮ್ಮದ್ ಸಾದ್ ಬೆಳಗಾಮಿ ಅವರು ಈ ಕೆಳಗಿನ ಹೇಳಿಕೆಗಳನ್ನು ಪತ್ರಿಕಾ ಪ್ರಕಟಣೆಯಲ್ಲಿ ನೀಡಿದ್ದಾರೆ.

ಉಡುಪಿಯ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಿಜಾಬ್ ಸಮಸ್ಯೆ:
31 ಡಿಸೆಂಬರ್ 2021 ರಂದು ತರಗತಿಗಳಿಗೆ ಹಾಜರಾಗುವಾಗ ಹಿಜಾಬ್ ದರಿಸದಂತೆ ಉಡುಪಿಯ ಈ ಕಾಲೇಜಿನಲ್ಲಿ ಮುಸ್ಲಿಮ್ ವಿದ್ಯಾರ್ಥಿನಿಯರಿಗೆ ಕಾಲೇಜಿನ ಮುಖ್ಯಸ್ಥರು ಸೂಚಿಸಿದ್ದಾರೆ. ಇದು ಮುಸ್ಲಿಂ ವಿದ್ಯಾರ್ಥಿನಿಯರು ಮತ್ತು ಮ್ಯಾನೇಜ್‌ಮೆಂಟ್‌ ನಡುವೆ ಅಸಮಾಧಾನ ಮತ್ತು ಸಂಘರ್ಷಕ್ಕೆ ಕಾರಣವಾಯಿತು. ಅಂದಿನಿಂದ ಇಂದಿನವರೆಗೂ ವಿದ್ಯಾರ್ಥಿನಿಯರನ್ನು ತರಗತಿಗಳಿಂದ ಹೊರಗಿಡಲಾಗುತ್ತಿದೆ.
ಉಡುಗೆಯ ಆಯ್ಕೆಯ ಹಕ್ಕು, ಒಬ್ಬರ ಧಾರ್ಮಿಕ ನಂಬಿಕೆಯ ಆಚರಣೆಯು ಮೂಲಭೂತ ಮತ್ತು ಸಾಂವಿಧಾನಿಕವಾಗಿ ಖಾತರಿಪಡಿಸಿದಹಕ್ಕಾಗಿದ್ದು, ಅದನ್ನು ಯಾವುದೇ ವ್ಯಕ್ತಿಗೆ ನಿರಾಕರಿಸಬಾರದು. ಹಿಜಾಬ್ ಎಂಬುವುದು ಮುಸ್ಲಿಮರು ಮತ್ತು ವಿವಿಧ ಸಮುದಾಯಗಳು ಬೇರೆ ಬೇರೆ ಹೆಸರುಗಳಲ್ಲಿ ಆಚರಣೆ ಮಾಡುವ ಒಂದು ಹಳೆಯ ಶಿಷ್ಠ ಉಡುಗೆಯಾಗಿದೆ. ಮಹಿಳೆಯರ ಅಸ್ಮಿತೆ ಮತ್ತು ಪ್ರಗತಿಗೆ ಇದು ಎಂದಿಗೂ ಅಡ್ಡಿಯಾಗಿರಲಿಲ್ಲ. ಉಡುಪಿಯಲ್ಲಿ ವಿದ್ಯಾರ್ಥಿನಿಯರಿಗೆ ಅದನ್ನೇ ನಿರಾಕರಿಸಿ, ಅವರ ಘನತೆ ಮತ್ತು ಶಿಕ್ಷಣದ ಹಕ್ಕನ್ನು ನಿರಾಕರಿಸುವುದು ಅತ್ಯಂತಖೇದನೀಯ ಮತ್ತು ಕಳವಳಕಾರಿ. 2016ರಲ್ಲಿ ಕೇರಳ ಹೈಕೋರ್ಟ್ ಒಂದು ಮಹತ್ವದ ಪ್ರಕರಣದಲ್ಲಿ ಈ ಹಕ್ಕನ್ನು ಎತ್ತಿಹಿಡಿದಿದೆ ಎಂಬುದನ್ನು ಗಮನಿಸಬೇಕು.
ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು, ಸರ್ಕಾರ ಮತ್ತು ಶಿಕ್ಷಣ ಸಚಿವರು ಈ ಪ್ರಕರಣವನ್ನು ಅಶಿಸ್ತಿನ ವಿಷಯವಾಗಿ ನೋಡದೆ ಮೂಲಭೂತ ಹಕ್ಕು ಮತ್ತು ನಮ್ಮ ಸಮಾಜದ ವೈವಿಧ್ಯತೆಯನ್ನು ಗೌರವಿಸುವಂತೆ ನಾವು ವಿನಂತಿಸುತ್ತೇವೆ. ವಿದ್ಯಾರ್ಥಿನಿಯರು ಬಯಸಿದಲ್ಲಿ ಹಿಜಾಬ್ ದರಿಸಲು ಮತ್ತು ತರಗತಿಗಳಿಗೆ ಅವರ ಹಾಜರಾತಿಯನ್ನು ತಕ್ಷಣವೇ ಪುನರಾರಂಭಿಸಲು ಅನುಮತಿಸಬೇಕು. ಸಮಸ್ಯೆಯನ್ನು ರಾಜಕೀಯಗೊಳಿಸಬಾರದು ಮತ್ತು ವಿಷಯವು ಸಮುದಾಯಗಳ ನಡುವೆ ಧ್ರುವೀಕರಣ ಮತ್ತು ದ್ವೇಷಕ್ಕೆ ಕಾರಣವಾಗಬಾರದು. ಉಡುಪಿ ನಗರದ ಮುಸ್ಲಿಂ ಒಕ್ಕೂಟ ಮತ್ತು ಸಮಾಜದ ಇತರ ಹಿರಿಯರ ಪ್ರಯತ್ನಗಳು ಸಮಸ್ಯೆಯ ಸೌಹಾರ್ದಯುತ ಪರಿಹಾರಕ್ಕೆ ಕಾರಣವಾಗಬೇಕು.

ಸೂರ್ಯನಮಸ್ಕಾರ:
73ನೇ ಗಣರಾಜ್ಯೋತ್ಸವದ ಅಂಗವಾಗಿ ಸಂಗೀತವಾದ್ಯದೊಂದಿಗೆ ಸೂರ್ಯನಮಸ್ಕಾರ ಮಾಡುವ ವಿಶೇಷ ಕಾರ್ಯಕ್ರಮಗಳನ್ನು ದೇಶಾದ್ಯಂತ ಹಮ್ಮಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರ ಸೂಚನೆ ನೀಡಿದೆ. 3ಲಕ್ಷ ವಿದ್ಯಾರ್ಥಿಗಳನ್ನು ಒಳಗೊಳ್ಳುವ ಮೂಲಕ 30ರಾಜ್ಯಗಳು, 30000ಸಂಸ್ಥೆಗಳಲ್ಲಿ 75ಕೋಟಿ ಸೂರ್ಯನಮಸ್ಕಾರದ ಗುರಿಯನ್ನು ಸಾಧಿಸುವುದು ಯೋಜನೆಯಾಗಿದೆ.
ಸೂರ್ಯನಮಸ್ಕಾರವು ಸೂರ್ಯನಿಗೆ ಸಾಷ್ಟಾಂಗ ನಮಸ್ಕಾರ ಮತ್ತು ಸ್ತೋತ್ರಗಳ ಪಠಣವನ್ನು ಒಳಗೊಂಡ ಭಕ್ತಿಪೂರ್ವಕ ಯೋಗಾಭ್ಯಾಸ ಎಂದು ನಾವು ಹೇಳಲು ಬಯಸುತ್ತೇವೆ. ಇಸ್ಲಾಂ ಧರ್ಮವು ಇಂತಹ ಯಾವುದೇ ಸೃಷ್ಟಿ ಆರಾಧನೆ ಅಥವಾ ಯಾವುದೇ ಸೃಷ್ಟಿಗೆ ಭಕ್ತಿಯನ್ನು ಸಮರ್ಪಿಸುವುದನ್ನು ಬಲವಾಗಿ ನಿಷೇಧಿಸುತ್ತದೆ ಮತ್ತು ಸಂಪೂರ್ಣ ವಿಶ್ವದ ಸೃಷ್ಟಿ ಕರ್ತಾದ ಅಲ್ಲಾಹನಿಗೆ ಮಾತ್ರ ಆರಾಧನೆಯನ್ನು ಸಲ್ಲಿಸಲು ಕಟ್ಟು ನಿಟ್ಟಾಗಿ ಆದೇಶಿಸುತ್ತದೆ. ಎಷ್ಟರವರೆಗೆಂದರೆ, ಮುಸ್ಲಿಮರು ಅತೀ ಹೆಚ್ಚು ಪ್ರೀತಿಸುವ ಪ್ರವಾದಿ ಮುಹಮ್ಮದ್ (ಸ) ಅವರ ವ್ಯಕ್ತಿತ್ವಕ್ಕೂ ಸಾಷ್ಟಾಂಗ ನಮಸ್ಕಾರ ಮಾಡಲು‌ ಮುಸ್ಲಿಮರಿಗೆ ಅವಕಾಶವಿಲ್ಲ. ಮಾತ್ರವಲ್ಲದೆ, ಸೂರ್ಯಾರಾಧನೆಯನ್ನು ಹೋಲುವ ಅಂತಹ ಯಾವುದೇ ಸಂದೇಹವನ್ನು ತಪ್ಪಿಸಲು ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ನಮಾಜ್ಮ ಮಾಡುವುದನ್ನೂ ನಿಷೇಧಿಸಿದೆ.
ಹಾಗಾಗಿ ಈ ವಿಷಯದಲ್ಲಿ ಪಾಲ್ಗೊಳ್ಳುವಂತೆ ನಿರೀಕ್ಷಿಸುವುದು ಅಥವಾ ಕೇಳುವುದು ಮುಸ್ಲಿಂ ಮಕ್ಕಳ ಮೂಲಭೂತ ಮತ್ತು ಸಾಂವಿಧಾನಿಕ ಹಕ್ಕಿನ ಉಲ್ಲಂಘನೆಯಾಗುತ್ತದೆ. ಸರ್ಕಾರವು ಒಂದು ಸಮುದಾಯದ ಧಾರ್ಮಿಕ ಆಚರಣೆಗಳನ್ನು ಇತರರ ಮೇಲೆ ಜಾರಿಗೊಳಿಸಬಾರದು. ಏಕೆಂದರೆ ಇದು ಜಾತ್ಯತೀತ ತತ್ವಗಳ ಉಲ್ಲಂಘನೆ ಮತ್ತು ಸಮಾನತೆ, ನ್ಯಾಯ ಮತ್ತು ಸ್ವಾತಂತ್ರ್ಯದ ಮನೋಭಾವಕ್ಕೆವಿ ರುದ್ಧವಾಗಿದೆ.
ಇಂತಹ ಆಚರಣೆಯಲ್ಲಿ ಪಾಲ್ಗೊಳ್ಳದಂತೆ ಮುಸ್ಲಿಂ ಪೋಷಕರು ಮತ್ತು ಮಕ್ಕಳಿಗೆ ನಾವು ಸಲಹೆ ನೀಡುತ್ತೇವೆ. ದೇವರ ಏಕತೆಯ ಪರಿಕಲ್ಪನೆ ಮತ್ತು ಅದರ ಬೇಡಿಕೆಗಳನ್ನು ಮಕ್ಕಳಿಗೆ ಅರ್ಥಮಾಡಿಕೊಳ್ಳಲು ಇದು ಒಂದು ಸಂದರ್ಭವಾಗಬೇಕು. ಈ ವೈವಿಧ್ಯತೆ ಮತ್ತು ಆಯ್ಕೆಯ ಸ್ವಾತಂತ್ರ್ಯವನ್ನು ಗೌರವಿಸುವಂತೆ ಶಾಲೆಗಳು ಮತ್ತು ಸಂಸ್ಥೆಗಳ ಆಡಳಿತವನ್ನು ನಾವು ಒತ್ತಾಯಿಸುತ್ತೇವೆ.

ನರಗುಂದ ಮತ್ತು ಇತರಸ್ಥಳಗಳಲ್ಲಿ ಕೋಮುಘಟನೆಗಳು:
ನರಗುಂದದಲ್ಲಿ ಇತ್ತೀಚೆಗೆ ನಡೆದ ಹಿಂಸಾತ್ಮಕ ಹಾಗೂ ಪ್ರಚೋದನಾತ್ಮಕ ಘಟನೆಗಳು ಮುಸ್ಲಿಂ ಯುವಕನ ಸಾವು ಮತ್ತು ಮತ್ತೊಬ್ಬನಿಗೆ ಗಂಭೀರ ಗಾಯಗಳಿಗೆ ಕಾರಣವಾಗಿರುವುದು ಅತ್ಯಂತ ಖಂಡನೀಯ. ಕಳೆದ ಕೆಲವು ವಾರಗಳಿಂದ ಇಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ಇದನ್ನು ಮೊದಲೇ ನಿಯಂತ್ರಿಸಬೇಕಿತ್ತು. ಕಳೆದೆರಡು ತಿಂಗಳುಗಳಿಂದ ಕ್ರೈಸ್ತರ ಆರಾಧನಾ ಸ್ಥಳಗಳ ಮೇಲೆ ದಾಳಿ, ನೈತಿಕ ಪೊಲೀಸ್‌ಗಿರಿ ಮತ್ತು ಗೂಢಾಚರ್ಯೆ, ಮಸೀದಿಗಳ ಬಗ್ಗೆ ಆಧಾರರಹಿತ ವಿವಾದಗಳು ಮತ್ತು ಆರೋಪಗಳನ್ನು ಎತ್ತುವುದು ಇತ್ಯಾದಿಗಳ ರೂಪದಲ್ಲಿ ಅಹಿತಕರ ಘಟನೆಗಳು ನಡೆಯುತ್ತಿವೆ.

ಇಂತಹ ಕೋಮು ಶಕ್ತಿಗಳ ಮನುಷ್ಯ ವಿರೋಧಿ ಕೃತ್ಯಗಳು ಪುನಾರಾವರ್ತನೆಯಾಗದಂತೆ ನಾವು ರಾಜ್ಯ ಸರಕಾರ ಹಾಗೂ ಪೋಲೀಸ್ ಇಲಾಖೆಯನ್ನು ಒತ್ತಾಯಿಸುತ್ತೇವೆ. ನಮ್ಮ ರಾಜ್ಯದಲ್ಲಿ ಕೋಮು ಸೌಹಾರ್ದತೆಯನ್ನು ರಾಜಕೀಯಗೊಳಿಸುವುದು ಮತ್ತು ಕದಡುವುದನ್ನು ಜನರು ಒಕ್ಕೊರಲಿನಿಂದ‌ ವಿರೋಧಿಸಬೇಕು. ವಿವಾದಾತ್ಮಕ ಮತಾಂತರ ವಿರೋಧಿ ಮಸೂದೆಯು ಕೂಡ ವಾತಾವರಣವನ್ನು ಹಾಳು ಮಾಡಿದೆ ಮತ್ತು ಸರಕಾರ ಅದನ್ನು ಪುನರ್ಪರಿಶೀಲಿಸಬೇಕಾಗಿದೆ ಹಾಗೂ ಆ ಪ್ರಕ್ರಿಯೆಯನ್ನು ಮುಂದುವರಿಸಬಾರದಾಗಿ ಒತ್ತಾಯಿಸುತ್ತೇವೆ.

Leave a Reply

Your email address will not be published. Required fields are marked *

error: Content is protected !!