ಸುಬ್ರಹ್ಮಣ್ಯ: ಬಿಸಿಲೆ ಘಾಟ್ ನಲ್ಲಿ ಅಪರಿಚಿತ ವ್ಯಕ್ತಿ ವಿಷ ಸೇವಿಸಿ ಆತ್ಮಹತ್ಯೆ ಯತ್ನ
ಸುಳ್ಯ: ಸುಬ್ರಹ್ಮಣ್ಯ ಬಿಸಿಲೆ ಘಾಟ್ ನಲ್ಲಿ ಅಪರಿಚಿತ ವ್ಯಕ್ತಿ ವಿಷ ಸೇವಿಸಿ ಆತ್ಮಹತ್ಯೆ ಯತ್ನಿಸಿ ಮಾಹಿತಿ ತಿಳಿದ ಯುವ ತೇಜಸ್ಸು ಟ್ರಸ್ಟ್ ಸದಸ್ಯರು ಆತನ ಪ್ರಾಣ ಉಳಿಸಲು ಹರಸಾಹಸ ಪಟ್ಟು ವಿಫಲವಾಗಿ ವ್ಯಕ್ತಿ ಮೃತಪಟ್ಟ ಘಟನೆ ಇಂದು ವರದಿಯಾಗಿದೆ.

ಬಿಸಿಲೆ ಘಾಟ್ ನ ಚೌಡೇಶ್ವರಿ ಅಮ್ಮನವರ ಗುಡಿಯಿಂದ ಸುಮಾರು 100 ಮೀಟರ್ ಇಳಿಜಾರಿನ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಅರೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸ್ಥಳೀಯರ ಗಮನಕ್ಕೆ ಬಂದು ಕೂಡಲೇ ಸುಬ್ರಮಣ್ಯದ ಯುವತೇಜಸ್ಸು ಟ್ರಸ್ಟ್ ಗೆ ಮಾಹಿತಿ ತಿಳಿಸಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಯುವ ತೇಜಸ್ಸು ತಂಡದ ಸದಸ್ಯರು ಆಂಬ್ಯುಲೆನ್ಸ್ ಸಮೇತ ಸ್ಥಳಕ್ಕೆ ತೆರಳಿದ್ದರು.
ಸುಮಾರು 60-70 ಆಸುಪಾಸಿನ ವ್ಯಕ್ತಿಯೊಬ್ಬರು ಸಂಪೂರ್ಣ ನಗ್ನವಾಗಿ ಅರೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು ಜೀವನ್ಮರಣ ಹೋರಾಟ ನಡೆಸುತ್ತಿದ್ದರು.
ಕೂಡಲೇ ಯುವ ತೇಜಸ್ಸು ತಂಡ ಆ ವ್ಯಕ್ತಿಯನ್ನು ಸುಬ್ರಮಣ್ಯ ಸರಕಾರಿ ಆಸ್ಪತೆಗೆ ಕರೆತಂದು, ಬಳಿಕ ಅವರನ್ನು ಸುಳ್ಯದ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು.
ಅದಾಗಲೇ ದಾರಿ ಮಧ್ಯೆಯೇ ಆ ವ್ಯಕ್ತಿ ಕೊನೆಯುಸಿರೆಳೆದಿದ್ದಾನೆ ಎಂದು ತಿಳಿದು ಬಂದಿದೆ.
ಮೃತ ವ್ಯಕ್ತಿಯ ಬಾಯಿಂದ ನೊರೆ ಬರುತ್ತಿದ್ದು ಕೀಟನಾಶಕದ ವಾಸನೆ ಬರುತ್ತಿರುವುದರಿಂದ ಮೇಲ್ನೋಟಕ್ಕೆ ಈತ ಕೀಟನಾಶಕ ಕುಡಿದಿರಬಹುದು ಎಂದು ಅಂದಾಜಿಸಲಾಗಿದೆ. ಮೃತ ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಘಟನೆಯ ಬಗ್ಗೆ ಮಾಹಿತಿ ಪಡೆದ ಸುಬ್ರಮಣ್ಯ ಪೊಲೀಸರು ಮತ್ತು ಎಸಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಅಪರಿಚಿತ ವ್ಯಕ್ತಿಯನ್ನು ಬದುಕಿ ಉಳಿಸಲು ಯತ್ನಿಸಿದ ಕಾರ್ಯಕ್ಕೆ ಯುವ ತೇಜಸ್ಸು ತಂಡಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದೆ.
ಈ ಕಾರ್ಯಾಚರಣೆಯಲ್ಲಿ ಯುವ ತೇಜಸ್ಸು ಟ್ರಸ್ಟ್ ನ ಸದಸ್ಯರಾದ ಗುರುಪ್ರಸಾದ್ ಪಂಜ, ನಿತಿನ್ ಭಟ್ ನೂಚಿಲ, ಉಜ್ವಲ್ ಕಾಜ್ಜೋಡಿ, ಹಿತೇಶ್ ಮಾಣಿಬೈಲ್ ಜೊತೆಗಿದ್ದರು ಹಾಗೂ ರಿಕ್ಷಾಚಾಲಕರಾದ ದೇವಿಪ್ರಸಾದ್ ಕುಲ್ಕುಂದ ಮತ್ತು ವಸಂತ ಕಲ್ಲಾಜೆ ಯುವತೇಜಸ್ಸು ತಂಡದೊಂದಿಗೆ ಸಹಕರಿಸಿದ್ದಾರೆ.




