February 1, 2026

ನೆಲ್ಯಾಡಿ: ಸಹಕಾರ ಸಂಘದ ಪಿಗ್ಮಿ ಸಂಗ್ರಾಹಕ ನಾಪತ್ತೆ

0
image_editor_output_image227968537-1642566560373.jpg

ನೆಲ್ಯಾಡಿ: ಸಹಕಾರ ಸಂಘವೊಂದರ ನೆಲ್ಯಾಡಿ ಶಾಖೆಯಲ್ಲಿ ಪಿಗ್ಮಿ ಸಂಗ್ರಾಹಕರಾಗಿದ್ದ ಕೌಕ್ರಾಡಿ ಗ್ರಾಮದ ದೋಂತಿಲ ನಿವಾಸಿ ಪ್ರವೀಣ್ ಕುಮಾರ್(26ವ)ಎಂಬವರು ಕಳೆದ 15 ದಿನಗಳಿಂದ ನಾಪತ್ತೆಯಾಗಿದ್ದು, ಇವರು ನೆಲ್ಯಾಡಿ ಅಸುಪಾಸಿನಲ್ಲಿ ಹಲವು ಮಂದಿಯಿಂದ ಲಕ್ಷಾಂತರ ರೂ. ಸಾಲ ಪಡೆದುಕೊಂಡಿದ್ದು ಸಾಲ ಹಿಂತಿರುಗಿಸಲು ಸಾಧ್ಯವಾಗದೆ ನಾಪತ್ತೆಯಾಗಿರುವುದಾಗಿ ವರದಿಯಾಗಿದೆ.

ಈ ಮಧ್ಯೆ ಜ.18ರಂದು ಮಧ್ಯಾಹ್ನದ ವೇಳೆಗೆ ಪತ್ರಿಕೆಯೊಂದರ ವರದಿಗಾರರಿಗೆ ವಾಟ್ಸಫ್ ಕರೆ ಮಾಡಿರುವ ಪ್ರವೀಣ್ ಕುಮಾರ್, ನಾನು ಬಿಹಾರದಲ್ಲಿದ್ದು ಛೋಟಾ ರಾಜನ್ ಗ್ಯಾಂಗ್‌ನವರ ಜಾಲದೊಳಗೆ ಸಿಲುಕಿಕೊಂಡಿರುವುದಾಗಿ ತಿಳಿಸಿದ್ದಾರೆ.

ಪ್ರವೀಣ್‌ಕುಮಾರ್‌ರವರು ಕಳೆದ 10 ಕ್ಕೂ ಹೆಚ್ಚು ವರ್ಷಗಳಿಂದ ನೆಲ್ಯಾಡಿಯಲ್ಲಿ ಪಿಗ್ಮಿ ಸಂಗ್ರಾಹಕರಾಗಿ ಕೆಲಸ ಮಾಡಿಕೊಂಡಿದ್ದು ಚಿರಪರಿಚಿತರಾಗಿದ್ದರು.

ಇಲ್ಲಿನ ಅಡಿಕೆ ವ್ಯಾಪಾರಿಗಳು, ನೆಲ್ಯಾಡಿಯ ಪ್ರತಿಷ್ಠಿತ ಉದ್ಯಮಿಗಳು ಸೇರಿದಂತೆ ಹಲವು ಮಂದಿಯ ವಿಶ್ವಾಸಗಳಿಸಿಕೊಂಡಿದ್ದ ಅವರು ಕೆಲವರಿಂದ ಲಕ್ಷಕ್ಕೂ ಮಿಕ್ಕಿ ಕೈ ಸಾಲ ಪಡೆದುಕೊಂಡು ಹಿಂತಿರುಗಿಸಲಾಗದೆ ಈಗ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ.

ಅಲ್ಲದೇ ಚಿಟ್‌ಫಂಡ್‌ನಲ್ಲೂ ಇವರಿಂದ ಕೆಲವರಿಗೆ ಮೋಸ ಆಗಿದೆ ಎಂಬ ದೂರುಗಳು ಕೇಳಿಬಂದಿವೆ. ಇವರು ಹಲವು ಮಂದಿಯಿಂದ ರೂ.55ಲಕ್ಷಕ್ಕೂ ಹೆಚ್ಚು ಕೈ ಸಾಲ ಮಾಡಿದ್ದರು ಎಂದು ಹೇಳಲಾಗಿದೆ.

ಪ್ರವೀಣ್‌ಕುಮಾರ್‌ರವರು ಜ.3ರಿಂದ ನಾಪತ್ತೆಯಾಗಿದ್ದು ಅವರ ಮೊಬೈಲ್ ಈಗ ಸ್ವಿಚ್ಡ್ ಆಫ್ ಆಗಿದೆ. ಪ್ರವೀಣ್ ನೆಲ್ಯಾಡಿ ವರ್ತಕ ಸಂಘದ ಕಾರ್ಯದರ್ಶಿಯೂ ಆಗಿದ್ದರು. ಮನೆಯವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!