ವಿಟ್ಲ: ರೈತರ ಮೇಲೆ ದಬ್ಬಾಳಿಕೆ ಮಾಡಿದರೆ ಜಿಲ್ಲಾಡಳಿತದ ಮುಂದೆ ಪ್ರತಿಭಟನೆ: ರೈತಸಂಘ ಎಚ್ಚರಿಕೆ
ವಿಟ್ಲ: ರೈತರ ನಾಶದ ದೃಶ್ಯವನ್ನು ನೋಡಲು ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರು ಕಾಯುತ್ತಿರುವಂತ್ತಿದೆ. ರೈತರು ೪೦೦ಕೆ.ವಿ. ವಿದ್ಯುತ್ ಮಾರ್ಗ ರಚನೆ ಮಾಡದಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದು, ಕರ್ನಾಟಕ ರಾಜ್ಯ ಉಚ್ಛ ನ್ಯಾಯಾಲಯ ರೈತರ ಮನವಿಯನ್ನು ಪುರಸ್ಕಾರ ಮಾಡುವಂತೆ ನಿರ್ದೇಶನ ನೀಡಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ ನಡಿಕಂಬಳಗುತ್ತು ಹೇಳಿದರು.
ವಿಟ್ಲದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಹಠಮಾರಿತನವನ್ನು ಪ್ರದರ್ಶಿಸಿದ ಜಿಲ್ಲಾಧಿಕಾರಿಗಳ ವಿರುದ್ಧ ವಿಟ್ಲ ಪ್ರದೇಶದ ೬೯ ಜನ ರೈತರು ವಕೀಲ ಧನಂಜಯ ಕುಮಾರ್ ಇರುವೈಲು ದೊಡ್ಡಗುತ್ತು ಮೂಲಕ ಕರ್ನಾಟಕ ಉಚ್ಛ ನ್ಯಾಯಾಲಯಕ್ಕೆ ರಿಟ್ ಅರ್ಜಿ ಸಲ್ಲಿಸಲಾಗಿತ್ತು. ಜಿಲ್ಲಾಡಳಿತ ರೈತರ ಮನವಿಯನ್ನು ಪುರಸ್ಕಾರ ಮಾಡಬೇಕು. ರೈತರ ಮೇಲೆ ದಬ್ಬಾಳಿಕೆ ಮಾಡಿದರೆ ಜಿಲ್ಲಾಡಳಿತದ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ವಿಟ್ಲ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ಅರಣ್ಯ ಇಲಾಖೆಯ ಮುಖ್ಯ ಆಯುಕ್ತರನ್ನು ಬೇಟಿ ಮಾಡಿ ಯೋಜನೆಗೆ ಯಾವುದೇ ಕಾರಣಕ್ಕೂ ಮೌಖಿಕ ಅಥವಾ ಲಿಖಿತ ಒಪ್ಪಿಗೆ ನೀಡಬಾರದು. ರೈತರ ಸ್ವಾಧೀನವಿರುವ ಗೇರು ಕೃಷಿ ಭೂಮಿ, ಸರ್ಕಾರಿ ಭೂಮಿ, ಕುಮ್ಕಿ ಭೂಮಿಯ ಮಂಜೂರಾತಿಗೆ ವಿವಿಧ ನಮೂನೆಯಲ್ಲಿ ಅರ್ಜಿ ನೀಡಿದ್ದು, ಇದನ್ನು ವಿಲೇವಾರಿಮಾಡದೆ ಆ ಭೂಮಿಯಲ್ಲಿ ವಿದ್ಯುತ್ ಮಾರ್ಗ ರಚಿಸುವುದನ್ನು ರೈತ ಸಂಘ ವಿರೋಧಿಸುತ್ತದೆ ಎಂದರು.
ರೈತ ಸಂಘದ ಜಿಲ್ಲಾಧ್ಯಕ್ಷ ಶ್ರೀಧರಶೆಟ್ಟಿ ಬೈಲುಗುತ್ತು ಮಾತನಾಡಿ ವಿದ್ಯುತ್ ಮಾರ್ಗದ ರಚನೆ ಬಗ್ಗೆ ವೈಜ್ಞಾನಿಕ ವರದಿಯನ್ನು ನೀಡುವಂತೆ ಜಿಲ್ಲಾಡಳಿತಕ್ಕೆ ಕೇಳಿದ್ದು, ಇದರ ಮಾಹಿತಿಯನ್ನು ಇನ್ನೂ ನೀಡಿಲ್ಲ. ತಮಿಳುನಾಡು ಭಾಗದಲ್ಲಿ ಸಿದ್ದಪಡಿಸಿದ ವೈಜ್ಞಾನಿಕ ವರದಿಯಲ್ಲಿ ಆತಂಕಕ್ಕೀಡಾಗುವ ವಿಚಾರಗಳಿದೆ. ಜಿಲ್ಲಾಡಳಿತ ವೈಜ್ಞಾನಿಕ ಮಾಹಿತಿಯನ್ನು ತಕ್ಷಣ ಬಹಿರಂಗ ಪಡಿಸಬೇಕು. ವಿದ್ಯುತ್ ಮಾರ್ಗ ಯೋಜನೆಯನ್ನು ಸ್ಥಗಿತ ಮಾಡದೇ ಹೋದಲ್ಲಿ ವಿಟ್ಲದಿಂದ ಜಿಲ್ಲಾಧಿಕಾರಿಗಳ ಕಛೇರಿವರೆಗೆ ಪಾದಯಾತ್ರೆ ಮಾಡುವ ಮೂಲಕ ಪ್ರತಿಭಟಿಸಲಾಗುವುದು ಎಂದರು.
ವಿಟ್ಲ ರೈತ ಹೋರಾಟ ಸಮಿತಿಯ ಅಧ್ಯಕ್ಷ ರಾಜೀವ ಗೌಡ ಮಾತನಾಡಿ ವಿದ್ಯುತ್ ಮಾರ್ಗದ ವಿಚಾರದಲ್ಲಿ ಅರಣ್ಯ ಇಲಾಖೆ ಯಾವುದೇ ಒಪ್ಪಿಗೆ ನೀಡಿಲ್ಲ ಎಂಬುದನ್ನು ಈಗಾಗಲೇ ಇಲಾಖೆ ದೃಢಪಡಿಸಿದೆ. ರೈತರ ಬಗ್ಗೆ ಕಾಳಜಿಯಿಲ್ಲದ ಜಿಲ್ಲಾಧಿಕಾರಿ, ಜಿಲ್ಲಾಧಿಕಾರಿಯಾಗಿ ವರ್ತನೆ ಮಾಡುತ್ತಿಲ್ಲ. ಜಿಲ್ಲಾಧಿಕಾರಿ ಜನರ ಸೇವೆ ಮಾಡುವ ಬದಲು ಕಂಪನಿಗಳ ಸೇವೆ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ವಿದ್ಯುತ್ ಮಾರ್ಗ ನಮ್ಮ ಕೃಷಿ ಜಮೀನಲ್ಲಿ ಹೋಗಬಾರದು ಎಂದು ಹೇಳಿದರು.
ಬಂಟ್ವಾಳ ತಾಲೂಕು ಕಾರ್ಯದರ್ಶಿ ಸುದೇಶ್ ಮೈಯ್ಯ, ಪುಣಚ ವಲಯ ಸಮಿತಿ ಅಧ್ಯಕ್ಷ ಇಸುಬು, ರೈತ ಹೋರಾಟ ಸಮಿತಿ ಕಾರ್ಯದರ್ಶಿಗಳಾದ ಲಕ್ಷ್ಮೀನಾರಾಯಣ, ಕೃಷ್ಣ ಪ್ರಸಾದ್, ಶಶಿಕುಮಾರ್ ಕೋಚೋಡಿ, ಲಕ್ಷ್ಮೀನಾರಾಯಣ ಮಂಜಲಾಡಿ, ಅಣ್ಣು ಗೌಡ, ಸಂಜೀವ ಗೌಡ, ಚಿತ್ತರಂಜನ್ ಮತ್ತಿತರರು ಉಪಸ್ಥಿತರಿದ್ದರು.
,,,,,,,,,,,,,,,,,,,




