ರಕ್ಷಣಾ ಸಂಶೋಧನೆ, ಅಭಿವೃದ್ಧಿ ಸಂಸ್ಥೆಯ ವಿಜ್ಞಾನಿ ಆತ್ಮಹತ್ಯೆ
ಬೆಂಗಳೂರು: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ವಿಜ್ಞಾನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಶರದ್ ಕಟಿಯಾರ್ ಆತ್ಮಹತ್ಯೆ ಮಾಡಿಕೊಂಡಿರುವ ವಿಜ್ಞಾನಿ. ಇವರು ಅ.21ರಂದು ಕೆ.ಆರ್.ಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಸೀಗೇಹಳ್ಳಿಯ ಅಪಾರ್ಟ್ಮೆಂಟ್ ನ ನಾಲ್ಕನೆ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ.
ಶರದ್ ಕಟಿಯಾರ್ ಡಿ ಆರ್ ಡಿ ಓ ಅಧೀನದ ವೈಮಾನಿಕ ಅಭಿವೃದ್ಧಿ ಸಂಸ್ಥೆಯ ಪ್ರೋಗ್ರಾಮಿಂಗ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಕಳೆದೊಂದು ತಿಂಗಳಿನಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಶರದ್ ಅವರು ಚಿಕಿತ್ಸೆ ಪಡೆದಿದ್ದರು. ಅ.21ರಂದು ಆಸ್ಪತ್ರೆಗೆ ಹೋಗಿ ಬಂದ ಶರದ್ ಕಟಿಯಾರ್ ಸಂಜೆ ನಾಲ್ಕನೇ ಮಹಡಿಗೆ ಹೋಗಿ ಅಲ್ಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ವೇಳೆ ಅವರ ತಂದೆ ಶರದ್ ರನ್ನ ಹಿಂಬಾಲಿಸಿದರಾದರೂ ಅವರನ್ನ ತಲುಪುವ ಮುನ್ನವೇ ಶರದ್ ಕೆಳಗೆ ಹಾರಿದ್ದಾರೆ ಎಂದು ಹೇಳಲಾಗಿದೆ. ಕೂಡಲೇ ಅವರನ್ನ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲಿ ಶರದ್ ಕಟಿಯಾರ್ ಕೊನೆಯುಸಿರೆಳೆದಿದ್ದರು.ಈ ಬಗ್ಗೆ ಕೆ.ಆರ್.ಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.




