October 28, 2026

ಮಂಗಳೂರು: ಸಾಕು ನಾಯಿ ಮಾಲೀಕರಿಗೆ ಮಹಾನಗರ ಪಾಲಿಕೆ ಕಟ್ಟುನಿಟ್ಟಿನ ಸೂಚನೆ; ನಿಯಮ ಉಲ್ಲಂಘಿಸಿದರೆ ₹50,000 ದಂಡ, ಜೈಲು ಶಿಕ್ಷೆ ಎಚ್ಚರಿಕೆ!

40c4a96d-902b-470a-9a53-4061b7942f6b

ಮಂಗಳೂರು: ನಗರದಲ್ಲಿ ಸಾಕು ನಾಯಿಗಳ ನಿರ್ವಹಣೆ ಹಾಗೂ ಸಾರ್ವಜನಿಕ ಸುರಕ್ಷತೆಯ ಹಿತದೃಷ್ಟಿಯಿಂದ ಮಂಗಳೂರು ಮಹಾನಗರ ಪಾಲಿಕೆ (MCC) ಸಾಕು ನಾಯಿ ಮಾಲೀಕರಿಗೆ ಕಟ್ಟುನಿಟ್ಟಿನ ಮಾರ್ಗಸೂಚಿ ಪ್ರಕಟಿಸಿದೆ. ಸರ್ವೋಚ್ಚ ನ್ಯಾಯಾಲಯದ ಆದೇಶಗಳು, ಪ್ರಾಣಿ ಜನನ ನಿಯಂತ್ರಣ ನಿಯಮಗಳು 2023 ಹಾಗೂ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ 1960 ರನ್ವಯ ನಿಯಮ ಪಾಲನೆ ಕಡ್ಡಾಯಗೊಳಿಸಲಾಗಿದೆ.


ನಿಯಮ ಉಲ್ಲಂಘಿಸುವವರ ವಿರುದ್ಧ ಗರಿಷ್ಠ ₹50,000 ದಂಡ, ಹಾಗೂ ಭಾರತೀಯ ನ್ಯಾಯ ಸಂಹಿತೆ (BNS 2023) ಅಡಿಯಲ್ಲಿ 5 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವುದಾಗಿ ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.
ಪಾಲಿಕೆ ಹೊರಡಿಸಿರುವ ಪ್ರಮುಖ ಮಾರ್ಗಸೂಚಿಗಳು: ಕಡ್ಡಾಯ ಲಸಿಕೆ: ಎಲ್ಲಾ ಸಾಕು ನಾಯಿಗಳಿಗೆ ರೇಬೀಸ್ ನಿರೋಧಕ ಲಸಿಕೆ ಹಾಗೂ ಅಗತ್ಯ ಲಸಿಕೆಗಳನ್ನು ಹಾಕಿ, ಪ್ರತಿವರ್ಷ ಬೂಸ್ಟರ್ ಡೋಸ್ ನೀಡಬೇಕು. ತಪಾಸಣೆ ವೇಳೆ ಲಸಿಕಾ ಪ್ರಮಾಣಪತ್ರ ಹಾಜರುಪಡಿಸುವುದು ಕಡ್ಡಾಯ.


• ಸಾರ್ವಜನಿಕ ಸ್ಥಳದಲ್ಲಿ ಮಲವಿಸರ್ಜನೆಗೆ ದಂಡ: ಸಾಕು ನಾಯಿಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಮುಕ್ತವಾಗಿ ಬಿಡಬಾರದು. ಒಂದು ವೇಳೆ ಸಾರ್ವಜನಿಕ ಸ್ಥಳದಲ್ಲಿ ನಾಯಿ ಮಲವಿಸರ್ಜನೆ ಮಾಡಿದರೆ, ಮಾಲೀಕರೇ ತಕ್ಷಣ ಸ್ವಚ್ಛಗೊಳಿಸಬೇಕು. ತಪ್ಪಿದ್ದಲ್ಲಿ ಘನತ್ಯಾಜ್ಯ ನಿರ್ವಹಣಾ ಉಪನಿಯಮಗಳಡಿ ₹1,000 ದಿಂದ ₹5,000 ವರೆಗೆ ಸ್ಥಳದಲ್ಲೇ ದಂಡ ವಿಧಿಸಲಾಗುತ್ತದೆ.
• ಸಂತಾನಹರಣ ಶಸ್ತ್ರಚಿಕಿತ್ಸೆ: ನೋಂದಾಯಿತ ಶ್ವಾನ ಸಂತಾನೋತ್ಪತ್ತಿಗೆ ಬಳಸದ ಎಲ್ಲಾ ಸಾಕು ನಾಯಿಗಳಿಗೆ ಅಧಿಕೃತ ಪಶುವೈದ್ಯರ ಮೂಲಕ ಕಡ್ಡಾಯವಾಗಿ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಬೇಕು.
• ಬ್ರೀಡರ್ಗಳ ಕಡ್ಡಾಯ ನೋಂದಣಿ: ಶ್ವಾನ ಸಂತಾನೋತ್ಪತ್ತಿ ಮತ್ತು ಮಾರಾಟದಲ್ಲಿ ತೊಡಗಿರುವವರು ‘ಕರ್ನಾಟಕ ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿ’ಯಿಂದ ಕಡ್ಡಾಯವಾಗಿ ನೋಂದಣಿ ಪ್ರಮಾಣಪತ್ರ ಪಡೆಯಬೇಕು. ನೋಂದಣಿ ಇಲ್ಲದೆ ವ್ಯಾಪಾರ ಪರವಾನಗಿ (Trade License) ನೀಡುವುದಿಲ್ಲ.
ನಾಯಿಗಳನ್ನು ರಸ್ತೆಗೆ ತಳ್ಳಿದರೆ ₹50,000 ದಂಡ – BNS ಅಡಿ ಕೇಸ್: ಸಾಕು ನಾಯಿ ಅಥವಾ ಮರಿಗಳನ್ನು ರಸ್ತೆ, ಖಾಲಿ ಜಾಗ, ಕಸದ ರಾಶಿಯಲ್ಲಿ ತ್ಯಜಿಸುವುದು ಗಂಭೀರ ಅಪರಾಧವಾಗಿದೆ. ಈ ನಿರ್ಲಕ್ಷ್ಯದಿಂದ ಪ್ರಾಣಿಗೆ ಮರಣ ಅಥವಾ ಅಂಗವೈಕಲ್ಯ ಸಂಭವಿಸಿದರೆ, ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ 5 ವರ್ಷ ಜೈಲು ಶಿಕ್ಷೆ, ದಂಡ ವಿಧಿಸಲಾಗುತ್ತದೆ.
ಸಾರ್ವಜನಿಕ ಸ್ಥಳದಲ್ಲಿ ಪ್ರಾಣಿಗಳನ್ನು ತ್ಯಜಿಸುವ ಪ್ರಕರಣ ಕಂಡುಬಂದರೆ ಗರಿಷ್ಠ ₹50,000 ದಂಡ ವಿಧಿಸಲಾಗುವುದು. ಅಲ್ಲದೆ, ತ್ಯಜಿಸಿದ ಪ್ರಾಣಿಗಳ ಪೋಷಣೆ ವೆಚ್ಚವನ್ನು ಮಾಲೀಕರಿಂದಲೇ ವಸೂಲಿ ಮಾಡಿ, ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗುವುದು.
ದೂರು ನೀಡಲು ಸಹಾಯವಾಣಿ ಸಂಖ್ಯೆ ಪ್ರಕಟ: ಯಾರಾದರೂ ಸಾಕು ನಾಯಿಗಳನ್ನು ಅಥವಾ ಮರಿಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ತಂದು ತ್ಯಜಿಸುತ್ತಿರುವುದು ಕಂಡುಬಂದಲ್ಲಿ, ಸಾರ್ವಜನಿಕರು ಫೋಟೋ ಅಥವಾ ವೀಡಿಯೋ ಸಾಕ್ಷ್ಯದೊಂದಿಗೆ ಪಾಲಿಕೆಯ ಸಹಾಯವಾಣಿಗೆ ಮಾಹಿತಿ ನೀಡಬಹುದು.
• ಪಾಲಿಕೆ ಸಹಾಯವಾಣಿ : 9449007722
• ರಾಜ್ಯ ಸಾರ್ವಜನಿಕ ದೂರು ಸಹಾಯವಾಣಿ: 1902

You may have missed

error: Content is protected !!