October 28, 2026

ಮಣಿಪಾಲ: ಮಾರಕಾಸ್ತ್ರಗಳನ್ನು ಇಟ್ಟುಕೊಂಡು ಹೊಂಚು ಹಾಕುತ್ತಿದ್ದ ಆರೋಪಿಯ ಬಂಧನ

4ece5bad-4b30-41fb-97bd-7a73c3e81952

ಮಣಿಪಾಲ: ಎದುರಾಳಿ ಗ್ಯಾಂಗ್ನ ಸದಸ್ಯರ ಮೇಲೆ ಹಲ್ಲೆ ನಡೆಸಲು ಮಾರಕಾಸ್ತ್ರಗಳನ್ನು ಇಟ್ಟುಕೊಂಡು ಹೊಂಚು ಹಾಕುತ್ತಿದ್ದ ಹಳೆ ಆರೋಪಿಯೊಬ್ಬನನ್ನು ಮಣಿಪಾಲ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.ಉಡುಪಿಯ ಕಿನ್ನಿಮುಲ್ಕಿಯ ನಿವಾಸಿ ಮಹಮ್ಮದ್ ಪರ್ವೇಜ್ (26) ಬಂಧಿತ ಆರೋಪಿ. ಅಕ್ಟೋಬರ್ 24ರಂದು ಮಣಿಪಾಲ ಪೊಲೀಸ್ ಠಾಣೆಯ ತನಿಖಾ ವಿಭಾಗದ ಉಪನಿರೀಕ್ಷಕರಾದ (PSI) ಶಂಭುಲಿಂಗಯ್ಯ ಎಂ. ಇ. ಅವರು ಸಿಬ್ಬಂದಿಯೊಂದಿಗೆ ಗಸ್ತಿನಲ್ಲಿದ್ದಾಗ, ಮಣಿಪಾಲ ವಿದ್ಯಾರತ್ನ ನಗರದ ‘ಮಾಂಡವಿ ಎಮರಾಲ್ಡ್’ ಕಟ್ಟಡದ ಹಿಂಭಾಗದ ಸಾರ್ವಜನಿಕ ರಸ್ತೆಯಲ್ಲಿ ವ್ಯಕ್ತಿಯೊಬ್ಬ ಮಾರಕಾಸ್ತ್ರಗಳೊಂದಿಗೆ ಅನುಮಾನಾಸ್ಪದವಾಗಿ ತಿರುಗಾಡುತ್ತಿರುವ ಖಚಿತ ಮಾಹಿತಿ ದೊರೆತಿತ್ತು.

ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸ್ ತಂಡ, ಆರೋಪಿ ಮಹಮ್ಮದ್ ಪರ್ವೇಜ್ನನ್ನು ವಶಕ್ಕೆ ಪಡೆದು ತಪಾಸಣೆ ನಡೆಸಿದೆ. ಈ ವೇಳೆ ಆತನ ಬಳಿಯಿದ್ದ: 20 ಇಂಚು ಉದ್ದದ ನೀಲಿ ಹಿಡಿಕೆಯುಳ್ಳ ಕಬ್ಬಿಣದ ಲಾಂಗ್ , 16 ಇಂಚು ಉದ್ದದ ಹಸಿರು ಹಿಡಿಕೆಯುಳ್ಳ ಕಬ್ಬಿಣದ ಚಾಕು, ಆಯುಧಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.


ಪೋಲಿಸರ ವಿಚಾರಣೆ ವೇಳೆ ಕೃತ್ಯದ ಹಿಂದಿನ ರಹಸ್ಯ ಬಯಲಾಗಿದೆ. ತನಗೆ ದಾವೂದ್, ಇಸಾಕ್ ಹಾಗೂ ‘ಗರುಡಾ ಗ್ಯಾಂಗ್’ನ ಕೆಲವರೊಂದಿಗೆ ತೀವ್ರ ವೈಮನಸ್ಸಿದ್ದು, ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸುವ ಉದ್ದೇಶದಿಂದಲೇ ಈ ಆಯುಧಗಳನ್ನು ತಂದಿಟ್ಟುಕೊಂಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಬಂಧಿತ ಮಹಮ್ಮದ್ ಪರ್ವೇಜ್ ವಿರುದ್ಧ ಈಗಾಗಲೇ ಉಡುಪಿ ನಗರ, ಶಿರ್ವ, ಸೆನ್ ಹಾಗೂ ಮಂಗಳೂರು ನಗರದ ಕಾವೂರು ಪೊಲೀಸ್ ಠಾಣೆಗಳಲ್ಲಿ ಮಾದಕ ವಸ್ತು ಮಾರಾಟ ಹಾಗೂ ಸೇವನೆಗೆ ಸಂಬಂಧಿಸಿದಂತೆ ಹಲವು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಯಾವುದೇ ಪರವಾನಗಿ ಅಥವಾ ಸೂಕ್ತ ಕಾರಣವಿಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಮಾರಕ ಆಯುಧಗಳನ್ನು ಇಟ್ಟುಕೊಂಡಿದ್ದಕ್ಕಾಗಿ, ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 175/2026, ಶಸ್ತ್ರಾಸ್ತ್ರ ಕಾಯ್ದೆ ಕಲಂ 4 ಹಾಗೂ 25(1B)(b) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮಾನ್ಯ ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

You may have missed

error: Content is protected !!