October 27, 2026

ಮೂರ್ಚೆ ರೋಗದ ನಾಟಕವಾಡಿ 17 ಕೈದಿಗಳು ಜೈಲಿನಿಂದ ಪರಾರಿ

0
image_editor_output_image15451262-1793084014460

ಥೇನಿ (ತಮಿಳುನಾಡು): ಖೈದಿಯೊಬ್ಬನಿಗೆ ಮೂರ್ಚೆ ರೋಗ (ಫಿಟ್ಸ್) ಬಂದಂತೆ ನಾಟಕವಾಡಿ, ಜೈಲು ಸಿಬ್ಬಂದಿ ಕೊಠಡಿಯ ಬಾಗಿಲು ತೆಗೆಯುತ್ತಿದ್ದಂತೆ ಸಿಬ್ಬಂದಿ ಮೇಲೆ ಭೀಕರ ಹಲ್ಲೆ ನಡೆಸಿ 17 ಕೈದಿಗಳು ಜೈಲಿನಿಂದ ಸರಣಿಯಾಗಿ ಪರಾರಿಯಾದ ಆಘಾತಕಾರಿ ಘಟನೆ ತಮಿಳುನಾಡಿನ ಥೇನಿ ಜಿಲ್ಲೆಯ ತೆಕ್ಕಂಪಟ್ಟಿ ಉಪ-ಜೈಲಿನಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದೆ.

ಪರಾರಿಯಾದವರ ಪೈಕಿ ಜೈಲಿನ ಹಿಂಭಾಗದ ಅರಣ್ಯ ಪ್ರದೇಶದಲ್ಲಿದ್ದ ಮಧುರೈ ಮೂಲದ ಒಬ್ಬ ಕೈದಿಯನ್ನು ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿ ಈಗಾಗಲೇ ಬಂಧಿಸಿದ್ದು, ಉಳಿದ 16 ಕೈದಿಗಳ ಪತ್ತೆಗೆ 17 ವಿಶೇಷ ತನಿಖಾ ತಂಡಗಳನ್ನು  ರಂಗಕ್ಕಿಳಿಸಲಾಗಿದೆ.

ಪೊಲೀಸ್ ಇಲಾಖೆಯ ಮಾಹಿತಿಯಂತೆ, ಈ 17 ಕೈದಿಗಳನ್ನು ಜೈಲಿನ ಒಂದೇ ಸೆಲ್‌ನಲ್ಲಿ ಇರಿಸಲಾಗಿತ್ತು. ಸೋಮವಾರ ತಡರಾತ್ರಿ ಕೈದಿಯೊಬ್ಬನಿಗೆ ತೀವ್ರ ಅನಾರೋಗ್ಯ/ಫಿಟ್ಸ್ ಬಂದಿದೆ ಎಂಬಂತೆ ಆರೋಪಿಗಳು ನಾಟಕವಾಡಿದ್ದಾರೆ. ಇದನ್ನು ನಂಬಿದ ಜೈಲು ಸಿಬ್ಬಂದಿ ಕೊಠಡಿಯ ಬಾಗಿಲು ತೆರೆಯುತ್ತಿದ್ದಂತೆ, ಸಂಘಟಿತವಾಗಿ ಧಾವಿಸಿದ ಕೈದಿಗಳು ಸಿಬ್ಬಂದಿಯ ಮೇಲೆ ದಾಳಿ ನಡೆಸಿ ಪರಾರಿಯಾಗಿದ್ದಾರೆ.

ಈ ಭೀಕರ ಹಲ್ಲೆಯಲ್ಲಿ ದರ್ಜೆ-2 ಪೊಲೀಸ್ ಸಿಬ್ಬಂದಿ ತಂಗಪಾಂಡಿ ಅವರ ತಲೆಗೆ ತೀವ್ರ ಗಾಯಗಳಾಗಿದ್ದು, ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇತರ ಇಬ್ಬರು ಜೈಲು ಸಿಬ್ಬಂದಿಗೂ ಸಣ್ಣಪುಟ್ಟ ಗಾಯಗಳಾಗಿವೆ ಎಂದು ದಕ್ಷಿಣ ವಲಯ ಐಜಿಪಿ ವಿಜಯೇಂದ್ರ ಬಿದರಿ ತಿಳಿಸಿದ್ದಾರೆ.

ಪರಾರಿಯಾದ ಕೈದಿಗಳು ಗಡಿ ದಾಟದಂತೆ ತಡೆಯಲು ನೆರೆಯ ಮಧುರೈ, ದಿಂಡಿಗಲ್ ಹಾಗೂ ಕೇರಳದ ಇಡುಕ್ಕಿ ಜಿಲ್ಲೆಗಳ ಪೊಲೀಸರನ್ನು ಕಟ್ಟೆಚ್ಚರದಲ್ಲಿರಿಸಲಾಗಿದೆ. ದಿಂಡಿಗಲ್-ಥೇನಿ ಹೆದ್ದಾರಿ ಸೇರಿದಂತೆ 16 ಪ್ರಮುಖ ಕಡೆಗಳಲ್ಲಿ ತುರ್ತು ಚೆಕ್‌ಪಾಯಿಂಟ್‌ಗಳನ್ನು ಸ್ಥಾಪಿಸಿ ಪ್ರತಿಯೊಂದು ವಾಹನವನ್ನು ತಪಾಸಣೆ ನಡೆಸಲಾಗುತ್ತಿದೆ ಎಂದು ದಿಂಡಿಗಲ್ ಎಸ್‌ಪಿ ಎಸ್. ಜಯಕುಮಾರ್ ಹೇಳಿದ್ದಾರೆ. ಕೈದಿಗಳ ಫೋಟೋಗಳನ್ನು ಎಲ್ಲಾ ಗಡಿ ಠಾಣೆಗಳಿಗೆ ರವಾನಿಸಲಾಗಿದೆ.

ಅತ್ಯಂತ ಭದ್ರತೆಯ ಉಪ-ಜೈಲಿನಿಂದಲೇ 17 ಕೈದಿಗಳು ಪರಾರಿಯಾಗಿರುವುದು ತಮಿಳುನಾಡು ರಾಜಕೀಯದಲ್ಲಿ ದೊಡ್ಡ ಬಿರುಗಾಳಿ ಎಬ್ಬಿಸಿದೆ. ಘಟನೆ ಕುರಿತು ‘ಎಕ್ಸ್’ (X)ನಲ್ಲಿ ಕಿಡಿಕಾರಿರುವ ಡಿಎಂಕೆ ರಾಜ್ಯಸಭಾ ಸಂಸದ ಪಿ. ವಿಲ್ಸನ್, “ಕಳೆದ ವಾರಷ್ಟೇ ಪುಝಲ್ ಜೈಲಿನಿಂದ ಇಬ್ಬರು ಕೈದಿಗಳು ಪರಾರಿಯಾಗಿದ್ದರು.

ಈಗ 17 ಕೈದಿಗಳ ಸರಣಿ ಪರಾರಿ ರಾಜ್ಯದ ಕಾನೂನು ಸುವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ” ಎಂದು ಬಣ್ಣಿಸಿದ್ದಾರೆ. ಅಲ್ಲದೆ, ಗೃಹ ಖಾತೆ ಹೊಂದಿರುವ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಈ ಭದ್ರತಾ ಲೋಪಕ್ಕೆ ನೈತಿಕ ಹೊಣೆ ಹೊರಬೇಕೆಂದು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!