ಕಾಸರಗೋಡು: ರಸ್ತೆಬದಿಯ ಮನೆಯ ಮೇಲೆ ಮಗುಚಿ ಬಿದ್ದ ಬೋರ್‌ವೆಲ್ ಲಾರಿ: ಇಬ್ಬರು ಕಾರ್ಮಿಕರು ಸಾವು
ಕಾಸರಗೋಡು: ಚಾಲಕನ ನಿಯಂತ್ರಣ ತಪ್ಪಿ ಬೋರ್‌ವೆಲ್ ಲಾರಿಯೊಂದು ರಸ್ತೆಬದಿಯ ಮನೆಯೊಂದರ ಮೇಲೆ ಮಗುಚಿ ಬಿದ್ದ ಪರಿಣಾಮ ಇಬ್ಬರು ವಲಸೆ ಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿದ ಘಟನೆ ವೆಸ್ಟ್ ಎಳೇರಿ ಗ್ರಾಮದ ವರಕ್ಕಾಡ್ ಜಂಕ್ಷನ್ ಬಳಿ ಶನಿವಾರ ಮುಂಜಾನೆ ಸಂಭವಿಸಿದೆ.
ಮೃತರನ್ನು ಮಧ್ಯಪ್ರದೇಶದ ದೇವೇಂದ್ರನ್ ಹಾಗೂ ಛತ್ತೀಸ್‌ಗಢದ ಮನಾಸಿರ್ ಎಂದು ಗುರುತಿಸಲಾಗಿದೆ. ಇವರಿಬ್ಬರೂ ಬೋರ್‌ವೆಲ್ ಲಾರಿಯಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಬೋರ್‌ವೆಲ್ ಕೊರೆತ ಕೆಲಸ ಮುಗಿಸಿ ಹಿಂತಿರುಗುತ್ತಿದ್ದ ಲಾರಿಯು ವರಕ್ಕಾಡ್ ಜಂಕ್ಷನ್ ಬಳಿಯ ಕಡಿದಾದ ಇಳಿಜಾರು ರಸ್ತೆಯಲ್ಲಿ ಸಾಗುತ್ತಿದ್ದಾಗ ಹಠಾತ್ ಚಾಲಕನ ನಿಯಂತ್ರಣ ತಪ್ಪಿದೆ. ಪರಿಣಾಮ ರಸ್ತೆಬದಿಯಲ್ಲಿದ್ದ ಜೇಸನ್ ಎಂಬುವರಿಗೆ ಸೇರಿದ ಮನೆಯ ಮೇಲೆ ಲಾರಿ ಮಗುಚಿ ಬಿದ್ದಿದೆ. ಅಪಘಾತದ ತೀವ್ರತೆಗೆ ಲಾರಿಯಲ್ಲಿದ್ದ ಇಬ್ಬರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ.
ಈ ಅಪಘಾತದಿಂದಾಗಿ ಮನೆಯ ಛಾವಣಿಯ ಒಂದು ಭಾಗ ಸಂಪೂರ್ಣವಾಗಿ ಕುಸಿದುಬಿದ್ದಿದೆ. ಆದಾಗ್ಯೂ, ಅಪಘಾತದ ಸಮಯದಲ್ಲಿ ಮನೆಯ ಒಳಗಿದ್ದ ಜೇಸನ್ ಮತ್ತು ಅವರ ಕುಟುಂಬದ ಸದಸ್ಯರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ಲಾರಿಯಲ್ಲಿದ್ದ ಭಾರೀ ತೂಕದ ಕ್ರೇನ್ ಭಾಗವು ತಾರಸಿಯ ಬದಿಗೆ ಸಿಲುಕಿಕೊಂಡಿದ್ದರಿಂದ ಸಂಭವನೀಯ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ಧಾವಿಸಿ, ಲಾರಿಯನ್ನು ತೆರವುಗೊಳಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.





