October 3, 2026

ಉಡುಪಿ: ಆಗುಂಬೆ ಘಾಟಿಯ ಕಂದಕಕ್ಕೆ ಬಿದ್ದ ಲಾರಿ: ಮೂರು ಗಂಟೆಗಳ ಕಾಲ ಲಾರಿಯಲ್ಲೇ ಸಿಲುಕಿದ್ದ ಚಾಲಕ

0
image_editor_output_image-602669055-1791012613158

ಉಡುಪಿ: ಆಗುಂಬೆ ಘಾಟಿಯ 2ನೇ ತಿರುವಿನಲ್ಲಿ ಲಾರಿಯೊಂದು ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದ ಪರಿಣಾಮ, ಚಾಲಕ ಸುಮಾರು ಮೂರು ಗಂಟೆಗಳ ಕಾಲ ಲಾರಿಯಲ್ಲೇ ಸಿಲುಕಿ ತೀವ್ರ ಯಾತನೆ ಅನುಭವಿಸಿದ ಘಟನೆ ಗುರುವಾರ ತಡರಾತ್ರಿ ಸಂಭವಿಸಿದೆ.

ಹುಬ್ಬಳ್ಳಿ ಮೂಲದ ಚಾಲಕ ಗುಡ್ಡಪ್ಪ ಮಡಿವಾಳ ಹಾಗೂ ಕ್ಲೀನರ್ ರವಿ ಎಂಬುವರು ಶಿವಮೊಗ್ಗದಿಂದ ಉಡುಪಿಗೆ ಬಾಳೆಕಾಯಿ ಹೇರಿಕೊಂಡು ಲಾರಿಯಲ್ಲಿ ಹೊರಟಿದ್ದರು. ರಾತ್ರಿ ಸುಮಾರು 12 ಗಂಟೆಯ ವೇಳೆಗೆ ಉಡುಪಿ ಜಿಲ್ಲಾ ವ್ಯಾಪ್ತಿಯ ಹೆಬ್ರಿ ಸಮೀಪದ ಆಗುಂಬೆ ಘಾಟಿಯ 2ನೇ ಅಪಾಯಕಾರಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಲಾರಿ, ಸುಮಾರು 150 ಅಡಿ ಆಳದ ಕಂದಕಕ್ಕೆ ಉರುಳಿದೆ.

 

ಅಪಘಾತ ಸಂಭವಿಸುತ್ತಿದ್ದಂತೆ ಸಮಯಪ್ರಜ್ಞೆ ಮೆರೆದ ಕ್ಲೀನರ್ ರವಿ ಲಾರಿಯಿಂದ ಹೊರಗೆ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಕ್ಷಣವೇ ಅವರು ಫೋನ್ ಮೂಲಕ ತಮ್ಮ ಪರಿಚಯಸ್ಥರಿಗೆ ಅಪಘಾತದ ಮಾಹಿತಿ ನೀಡಿದ್ದಾರೆ.

ಅಪಘಾತದ ತೀವ್ರತೆಗೆ ಲಾರಿಯ ಕ್ಯಾಬಿನ್ ನಜ್ಜುಗುಜ್ಜಾಗಿದ್ದು, ಚಾಲಕ ಗುಡ್ಡಪ್ಪ ಅವರ ಎರಡೂ ಕಾಲುಗಳು ಕಬ್ಬಿಣದ ಚೌಕಟ್ಟಿನಲ್ಲಿ ಸಿಲುಕಿಕೊಂಡಿದ್ದವು. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಪ್ರಭಾಕರ್ ಪೂಜಾರಿ ಹಾಗೂ ಅವರ ತಂಡ ಸ್ಥಳಕ್ಕೆ ಧಾವಿಸಿ, ಸುಮಾರು ಮೂರು ಗಂಟೆಗಳ ಕಾಲ ಸತತ ಕಾರ್ಯಾಚರಣೆ ನಡೆಸಿ ಚಾಲಕನನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದೆ.

ತೀವ್ರವಾಗಿ ಗಾಯಗೊಂಡಿರುವ ಚಾಲಕ ಗುಡ್ಡಪ್ಪ ಅವರನ್ನು ಉಡುಪಿಯ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಕಂದಕದಲ್ಲಿದ್ದ ಲಾರಿಯನ್ನು ಕ್ರೇನ್ ಸಹಾಯದಿಂದ ಮೇಲಕ್ಕೆತ್ತಲಾಗಿದೆ.

Leave a Reply

Your email address will not be published. Required fields are marked *

error: Content is protected !!