ಕಾಪು: ಆಟೋ ರಿಕ್ಷಾ, ಟೆಂಪೋ ನಡುವೆ ಅಪಘಾತ: ಒಂದೂವರೆ ವರ್ಷದ ಮಗು ಮೃತ್ಯು
ಕಾಪು: ಕಾಪು ಫ್ಲೈಓವರ್ ಬಳಿ ಶನಿವಾರ ನಡೆದ ಆಟೋ ರಿಕ್ಷಾ ಮತ್ತು ಟೆಂಪೋ ನಡುವಿನ ಭೀಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಒಂದೂವರೆ ವರ್ಷದ ಮಗು, ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದೆ.
ಉಚ್ಚಿಲದಿಂದ ಉಡುಪಿ ಕಡೆಗೆ ಚಲಿಸುತ್ತಿದ್ದ ಆಟೋ ರಿಕ್ಷಾಗೆ, ರಸ್ತೆಬದಿಯ ಬ್ಯಾನರ್ ತೆರವುಗೊಳಿಸಲು ಬಳಸಲಾಗುತ್ತಿದ್ದ ಕಾಪು ಪುರಸಭೆಯ ಟೆಂಪೋ ಡಿಕ್ಕಿ ಹೊಡೆದಿತ್ತು. ಅಪಘಾತದ ವೇಳೆ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಉಚ್ಚಿಲ ನಿವಾಸಿ ಸಂಧ್ಯಾ ಹಾಗೂ ಅವರ ಮಕ್ಕಳಾದ ಗಾಯನ್ ಮತ್ತು ಸುವಿತ್ ಗಾಯಗೊಂಡಿದ್ದರು.
ಗಾಯಾಳುಗಳಲ್ಲಿ ಒಂದೂವರೆ ವರ್ಷದ ಮಗು ಸುವಿತ್ ಪರಿಸ್ಥಿತಿ ತೀರಾ ಗಂಭೀರವಾಗಿತ್ತು. ಉಡುಪಿಯ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆಯುತ್ತಿದ್ದ ಮಗು ಸೋಮವಾರ ಮೃತಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ಕುರಿತು ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.




