ಇ-ಕೆವೈಸಿ ಪ್ರಕ್ರಿಯೆಗೆ ಶೀಘ್ರದಲ್ಲಿಯೇ ‘ಹೊಸ ಆ್ಯಪ್ ಬಿಡುಗಡೆ’: ಸಚಿವ ರಿಝ್ವಾನ್ ಅರ್ಶದ್
ಬೆಂಗಳೂರು: ಆಹಾರ ಇಲಾಖೆಯಡಿ ಇ-ಕೆವೈಸಿ ಸೇರಿದಂತೆ ಇನ್ನಿತರೆ ಪ್ರಕ್ರಿಯೆ ವೇಳೆ ಉಲ್ಬಣಗೊಳ್ಳುತ್ತಿರುವ ಸರ್ವರ್, ತಾಂತ್ರಿಕ ದೋಷ ಹಿನ್ನೆಲೆ ಶೀಘ್ರದಲ್ಲಿಯೇ ‘ಹೊಸ ಆ್ಯಪ್ ಬಿಡುಗಡೆ’ ಆಗಲಿದ್ದು, ಮನೆಯಿಂದಲೇ ಎಲ್ಲ ಪ್ರಕ್ರಿಯೆ ಮಾಡಿಕೊಳ್ಳಬಹುದಾಗಿದೆ ಎಂದು ಆಹಾರ ಸಚಿವ ರಿಝ್ವಾನ್ ಅರ್ಶದ್ ಹೇಳಿದ್ದಾರೆ.
ವಿಕಾಸಸೌಧದಲ್ಲಿ ಆಹಾರ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ ಅವರು, ಸಾರ್ವಜನಿಕರು ನ್ಯಾಯಬೆಲೆ ಅಂಗಡಿಗಳಿಗೆ ತೆರಳುವ ಅಗತ್ಯ ಕಡಿಮೆ ಮಾಡುವ ಉದ್ದೇಶದಿಂದ, ಮೊಬೈಲ್ ಮೂಲಕವೇ ಮುಖ ದೃಢೀಕರಣ ಬಳಸಿ ಇ-ಕೆವೈಸಿ ಮಾಡಿಕೊಳ್ಳುವ ಸೌಲಭ್ಯವನ್ನು ನಾಗರಿಕ ಸೇವೆಗಳ ಎಲೆಕ್ಟ್ರಾನಿಕ್ ವಿತರಣಾ ನಿರ್ದೇಶನಾಲಯ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.
ಇ-ಕೆವೈಸಿ ಮಾಡಿಸಬೇಕಿರುವ 2,67,64,276 ಫಲಾನುಭವಿಗಳಲ್ಲಿ ಇದುವರೆಗೂ 97,54,197 ಪಲಾನುಭವಿಗಳು ಇ-ಕೆವೈಸಿ ಮಾಡಿಸಿದ್ದು ಶೇ.37ರಷ್ಟು ಪೂರ್ಣಗೊಂಡಿದೆ. ಪ್ರತಿನಿತ್ಯ ಸರಾಸರಿ 5.40ಲಕ್ಷ ಪಲಾನುಭವಿಗಳು ಇ-ಕೆವೈಸಿ ಮಾಡುತ್ತಿದ್ದಾರೆ. ಆಹಾರ ಇಲಾಖೆಯ ಸರ್ವರ್ ಗೆ ಸಂಬಂಧಿಸಿದ ಸಮಸ್ಯೆಗಳು ಹಿಂದಿನಿಂದಲೂ ಇದ್ದು, ನಾನು ಆಹಾರ ಇಲಾಖೆಯ ಸಚಿವನಾಗಿ ಅಧಿಕಾರ ವಹಿಸಿಕೊಂಡ ನಂತರ ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಏಜೆನ್ಸಿ ಯನ್ನು ನೇಮಕ ಮಾಡಿದ್ದೇನೆ ಎಂದರು.
ಸಭೆಯಲ್ಲಿ ಆಹಾರ ಇಲಾಖೆ ಕಾರ್ಯದರ್ಶಿ ಕನಗವಲ್ಲಿ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಜರಿದ್ದರು.
ಮನೆಯಲ್ಲಿಯೇ ಇ-ಕೆವೈಸಿ ಮಾಡಿ ಈ ಮೊಬೈಲ್ ಅಪ್ಲಿಕೇಶನ್ ಅನ್ನು ಇನ್ನೊಂದು ವಾರದೊಳಗೆ ಸಾರ್ವಜನಿಕರ ಬಳಕೆಗೆ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಫಲಾನುಭವಿಗಳು ತಮ್ಮ ಮೊಬೈಲ್‍ನಲ್ಲಿಯೇ ಸ್ವತಃ ಇ-ಕೆವೈಸಿ ಪೂರ್ಣಗೊಳಿಸಬಹುದಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.





