September 3, 2026

ಶಾಲೆಯ ಆವರಣದಲ್ಲೇ ಹೃದಯಾಘಾತದಿಂದ ವಿದ್ಯಾರ್ಥಿ ಮೃತ್ಯು

0
IMG-20260903-WA0001

ಮಂಡ್ಯ: ವಿದ್ಯಾರ್ಥಿಯೊಬ್ಬ ಹೃದಯಾಘಾತದಿಂದ ಶಾಲೆಯ ಆವರಣದಲ್ಲೇ ಮೃತಪಟ್ಟಿರುವ ಘಟನೆ ಮದ್ದೂರು ತಾಲೂಕು ಸೋಮನಹಳ್ಳಿ ಗ್ರಾಮದ ಖಾಸಗಿ ಶಾಲೆಯಲ್ಲಿ ಬುಧವಾರ ಮಧ್ಯಾಹ್ನ ನಡೆದಿರುವುದು ವರದಿಯಾಗಿದೆ.

ಸೋಮನಹಳ್ಳಿ ಗ್ರಾಮದ ಎಸ್.ಸಿ.ಎಂ.ಎಂ ಪ್ರೌಢಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ ವೀರಮಣಿ (14) ಮೃತಪಟ್ಟ ವಿದ್ಯಾರ್ಥಿ.

ವೀರಮಣಿ, ಅಜ್ಜ-ಅಜ್ಜಿಯ ಮನೆಯಲ್ಲಿದ್ದುಕೊಂಡು ವ್ಯಾಸಂಗ ಮಾಡುತ್ತಿದ್ದ. ಎಂದಿನಂತೆ ಬುಧವಾರ ಶಾಲೆಗೆ ಹಾಜರಾಗಿದ್ದ ಈತ, ಮಧ್ಯಾಹ್ನ ಊಟದ ವಿರಾಮದ ಸಮಯದಲ್ಲಿ ನೀರು ಕುಡಿಯುತ್ತಿದ್ದಾಗ ತಲೆತಿರುಗಿ ನೆಲಕ್ಕುರುಳಿದ ಎನ್ನಲಾಗಿದೆ.

ತಕ್ಷಣವೇ ಶಿಕ್ಷಕರು, ಬಾಲಕನನ್ನು ಶಾಲಾ ವಾಹನದಲ್ಲೇ ಮದ್ದೂರಿನ ಸಾರ್ವಜನಿಕ ಆಸ್ಪತ್ರೆಗೆ ಕೊಂಡೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ, ಬಾಲಕನ ಸ್ಥಿತಿ ಚಿಂತಾಜನಕವಾಗಿದ್ದ ಹಿನ್ನೆಲೆಯಲ್ಲಿ, ವೈದ್ಯರ ಸೂಚನೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ಕರೆತರಲಾಯಿತು. ಮಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರು ತಪಾಸಣೆ ನಡೆಸಿದಾಗ, ಬಾಲಕ ತೀವ್ರ ಹೃದಯಾಘಾತದಿಂದ ಮಾರ್ಗಮಧ್ಯೆಯೇ ಮೃತಪಟ್ಟಿರುವುದಾಗಿ ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!