ನೇಪಾಳದಿಂದ ಪ್ರವಾಹದಿಂದ ಬಿಹಾರ್ ಗೆ ತೇಳಿಬಂದ ಮೀನುಗಳು: ಮೀನುಗಳನ್ನು ತಿನ್ನುದಂತೆ ಎಚ್ಚರಿಕೆ ನೀಡಿದ ಸರ್ಕಾರ
ಬಿಹಾರ: ನೇಪಾಳದಿಂದ ಹರಿದುಬಂದ ಪ್ರವಾಹದ ನೀರಿನಿಂದ ಬಾಧಿತ ಪ್ರದೇಶಗಳಲ್ಲಿ ಕಂಡುಬಂದ ಅಪರಿಚಿತ ಮೀನುಗಳನ್ನು ಸೇವಿಸಿದ ಬಳಿಕ ಕೆಲವರು ಅಸ್ವಸ್ಥರಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ, ಅಪರಿಚಿತ ಮೀನುಗಳನ್ನು ಸೇವಿಸದಂತೆ ಬಿಹಾರ ಸರ್ಕಾರ ಜನರಿಗೆ ಎಚ್ಚರಿಕೆ ನೀಡಿದೆ ಎಂದು ವರದಿಯಾಗಿದೆ.ಈ ಕುರಿತು ಸೂಚನೆ ಹೊರಡಿಸಿರುವ ಹೈನುಗಾರಿಕೆ, ಪಶುಸಂಗೋಪನೆ ಮತ್ತು ಮೀನುಗಾರಿಕಾ ಸಂಪನ್ಮೂಲ ಇಲಾಖೆ, ಪ್ರವಾಹದ ಬಳಿಕ ರಾಜ್ಯದ ವಿವಿಧ ಭಾಗಗಳಲ್ಲಿ ಗುರುತು ಹಾಗೂ ಪರಿಚಯವಿಲ್ಲದ ಅಪರೂಪದ ಮೀನುಗಳ ತಳಿಗಳು ಪತ್ತೆಯಾಗಿವೆ ಎಂದು ತಿಳಿಸಿದೆ. ಅಪರಿಚಿತ ತಳಿಯ ಮೀನುಗಳು ಕಂಡುಬಂದರೆ ಜಿಲ್ಲಾ ಮೀನುಗಾರಿಕಾ ಅಧಿಕಾರಿ ಅಥವಾ ಸ್ಥಳೀಯ ಆಡಳಿತಕ್ಕೆ ಮಾಹಿತಿ ನೀಡುವಂತೆ ನಿವಾಸಿಗಳಿಗೆ ಸೂಚಿಸಲಾಗಿದೆ.ಕೆರೆ, ನದಿ, ಸರೋವರ ಮತ್ತು ಜಲಾಶಯಗಳಿಂದ ಕೊಚ್ಚಿಹೋಗುವ ಮೀನುಗಳು ದೂರದ ಪ್ರದೇಶಗಳಿಗೂ ತಲುಪುವ ಸಾಧ್ಯತೆಯಿದೆ. ಇಂತಹ ಮೀನುಗಳು ಒಳಚರಂಡಿ ನೀರು, ಸತ್ತ ಪ್ರಾಣಿಗಳು ಹಾಗೂ ಕೊಳೆಯುತ್ತಿರುವ ತ್ಯಾಜ್ಯಗಳ ಸಂಪರ್ಕಕ್ಕೆ ಬಂದು ಕಲುಷಿತಗೊಂಡಿರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.ಇಂತಹ ಕಲುಷಿತ ಮೀನುಗಳನ್ನು ಸೇವಿಸುವುದರಿಂದ ಬ್ಯಾಕ್ಟೀರಿಯಾ, ವೈರಲ್ ಹಾಗೂ ಶಿಲೀಂಧ್ರ ಸೋಂಕುಗಳು ಹರಡುವ ಅಪಾಯ ಹೆಚ್ಚಾಗಬಹುದು ಎಂದು ಇಲಾಖೆ ತಿಳಿಸಿದೆ.





