October 16, 2026

ನೇಪಾಳ: ಪ್ರವಾಹದ ನೀರಿನಲ್ಲಿ ತೇಲಿಬಂದ ₹57 ಲಕ್ಷ ನಗದು ತುಂಬಿದ್ದ ಲಾಕರ್: ಹಣ ದೋಚಲು ಯತ್ನಿಸಿದ 29 ಮಂದಿ ಪೊಲೀಸರ ವಶಕ್ಕೆ

0
IMG-20260830-WA0002

ಕಠ್ಮಂಡು: ನೇಪಾಳದ ಭೀಕರ ಪ್ರವಾಹದ ನೀರಿನಲ್ಲಿ ಕೊಚ್ಚಿಹೋದ ಬ್ಯಾಂಕ್ ಸೇಫ್ ಲಾಕರ್ ಒಂದನ್ನು ಒಡೆದು, ಅದರಲ್ಲಿದ್ದ ಹಣವನ್ನು ಕದ್ದ ಆರೋಪದ ಮೇಲೆ ಪೊಲೀಸರು 29 ಜನರನ್ನು ವಶಕ್ಕೆ ಪಡೆದಿದ್ದಾರೆ.

ರಸುವಾ ಜಿಲ್ಲೆಯ ಭೋಟೇಕೋಶಿ ಪ್ರದೇಶದಿಂದ ಈ ಲಾಕರ್ ಪ್ರವಾಹದ ನೀರಿನಲ್ಲಿ ಕೊಚ್ಚಿಕೊಂಡು ಬಂದಿದ್ದು, ನಂತರ ಧಾಡಿಂಗ್ ಜಿಲ್ಲೆಯ ಗಾಲ್ಛಿ ಗ್ರಾಮೀಣ ನಗರಪಾಲಿಕೆ-4ರ ಬೆಲ್ಖುಖೋಲಾ ಬಳಿ ತ್ರಿಶೂಲಿ ನದಿ ದಂಡೆಗೆ ತೇಲಿಬಂದಿತ್ತು.

ನದಿ ದಂಡೆಯಲ್ಲಿ ಸಿಕ್ಕ ಲಾಕರ್ ಅನ್ನು ಸ್ಥಳೀಯರು ಬಲವಂತವಾಗಿ ತೆರೆದು ಅದರಲ್ಲಿದ್ದ ಹಣವನ್ನು ದೋಚಿದ್ದಾರೆ ಎಂಬ ಮಾಹಿತಿ ದೊರೆತ ನಂತರ ಪೊಲೀಸರು ತನಿಖೆ ಆರಂಭಿಸಿ 29 ಜನರನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತರಲ್ಲಿ ಹೆಚ್ಚಿನವರು ಗಾಲ್ಚಿ-4 ರ ಮಾಸ್ತರ್ ನಿವಾಸಿಗಳು. ಕೆಲವರು ಗಾಲ್ಚಿ-6 ರ ಆದಮ್‌ಘಾಟ್ ಮತ್ತು ಸಿದ್ಧಲೆಕ್-7 ರ ಆದಮ್‌ತಾರ್‌ನವರಾಗಿದ್ದರೆ, ಇತರರು ಮೂಲತಃ ಚಿಟ್ವಾನ್ ಮತ್ತು ಪಾರ್ಸಾಗೆ ಸೇರಿದವರಾಗಿದ್ದು, ಪ್ರಸ್ತುತ ಧಾಡಿಂಗ್‌ನಲ್ಲಿ ವಾಸಿಸುತ್ತಿದ್ದಾರೆ.

ವಶಪಡಿಸಿಕೊಂಡ ನಗದು ಮೂಲದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಮತ್ತು ಘಟನೆಯಲ್ಲಿ ಹೆಚ್ಚುವರಿ ಶಂಕಿತರು ಭಾಗಿಯಾಗಿದ್ದಾರೆಯೇ ಎಂದು ಪರಿಶೀಲಿಸುತ್ತಿದ್ದಾರೆ.

ವಶಕ್ಕೆ ಪಡೆಯಲಾದ ವ್ಯಕ್ತಿಗಳಿಂದ 92,68,505 ನೇಪಾಳಿ ರೂಪಾಯಿಗಳನ್ನು (ಭಾರತೀಯ ಮೌಲ್ಯದ ಸುಮಾರು 57 ಲಕ್ಷ ರೂ.) ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!