ವಿಟ್ಲ ಜೇಸಿ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವದ ಸಂಭ್ರಮ
ವಿಟ್ಲ: ವಿಟ್ಲ ಜೇಸಿ ಶಾಲೆಯಲ್ಲಿ 80ನೇ ಸ್ವಾತಂತ್ರ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಧರ್ ಶೆಟ್ಟಿ ಅವರು ಧ್ವಜಾರೋಹಣ ನೆರವೇರಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ನಿವೃತ್ತ ಸೇನಾಧಿಕಾರಿ ಶ್ರೀ ಮಾಧವ ಬಿ.ಕೆ. ಅವರು ಭಾಗವಹಿಸಿದ್ದರು. ಸ್ವಾತಂತ್ರ್ಯೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಶಾಲಾ ಸಹಾಯಕಿಯರಿಗೆ ವಿಶೇಷ ಗೌರವ ಸಲ್ಲಿಸಲಾಯಿತು.
ಮುಖ್ಯ ಅತಿಥಿ ಶ್ರೀ ಮಾಧವ ಬಿ.ಕೆ. ಮಾತನಾಡಿ, ವಿದ್ಯಾರ್ಥಿಗಳು ರಾಷ್ಟ್ರದ ಭವಿಷ್ಯವನ್ನು ರೂಪಿಸುವ ಶ್ರೇಷ್ಠ ನಾಯಕರಾಗಿ ಹೊರಹೊಮ್ಮಬೇಕು. ಜೀವನದಲ್ಲಿ ಶಿಸ್ತು, ದೇಶಪ್ರೇಮ ಹಾಗೂ ಪ್ರಾಮಾಣಿಕತೆಯನ್ನು ಅಳವಡಿಸಿಕೊಳ್ಳಬೇಕು. ದೇಶಸೇವೆಯಲ್ಲಿ ಪ್ರತಿಯೊಬ್ಬ ನಾಗರಿಕನ ಕೊಡುಗೆಯೂ ಅಮೂಲ್ಯವಾದದ್ದು ಎಂದು ಹೇಳಿದರು.
ಶಾಲಾ ಅಧ್ಯಕ್ಷರಾದ ಶ್ರೀಧರ್ ಶೆಟ್ಟಿ ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯೋತ್ಸವದ ಮಹತ್ವವನ್ನು ವಿವರಿಸಿದರು. ಬಳಿಕ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಇದೇ ಸಂದರ್ಭದಲ್ಲಿ ವಿಟ್ಲ ಗ್ರಾಮೀಣ ಸಹಕಾರಿ ಸಂಘದ ವತಿಯಿಂದ ಶಾಲೆಯ ಜೇಸಿ ಪೆವಿಲಿಯನ್‌ಗೆ HVLS ಫ್ಯಾನ್ ಅನ್ನು ಕೊಡುಗೆಯಾಗಿ ನೀಡಲಾಯಿತು. ಸಂಘದ ಅಧ್ಯಕ್ಷರಾದ ಜಗನ್ನಾಥ ಸಾಲಿಯಾನ್ ಅವರು ಫ್ಯಾನ್‌ಗೆ ವಿಧ್ಯುಕ್ತ ಚಾಲನೆ ನೀಡಿ ಉದ್ಘಾಟಿಸಿದರು. ಬ್ಯಾಂಕಿನ ಆಡಳಿತ ಮಂಡಳಿಯ ಸದಸ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ರಾಧಾಕೃಷ್ಣ ಪೈ, ಕಾರ್ಯದರ್ಶಿ ರಾಘವೇಂದ್ರ ಪೈ, ಜತೆ ಕಾರ್ಯದರ್ಶಿ ಹಸನ್ ವಿಟ್ಲ, ಪ್ರಾಂಶುಪಾಲ ಜಯರಾಮ ರೈ, ಉಪಪ್ರಾಂಶುಪಾಲೆಯರಾದ ಕವಿತಾ ಹಾಗೂ ಹೇಮಲತಾ, ಶಾಲಾ ನಾಯಕಿ ರಾಶಿ ಜಿ.ಆರ್. ಮತ್ತು ಉಪನಾಯಕ ಅರ್ಪಿತ್ ಕೆ ಶೆಟ್ಟಿ ಸೇರಿದಂತೆ ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.
ಪ್ರೌಢಶಾಲಾ ವಿದ್ಯಾರ್ಥಿನಿಯರು ಪ್ರಾರ್ಥನೆ ಸಲ್ಲಿಸಿದರು. ಸಹಶಿಕ್ಷಕಿಯರಾದ ನಯನಾಕ್ಷಿ ಬಿ, ಭವ್ಯ ಶ್ರೀ ಬಿ, ಹೇಮಲತಾ ಹಾಗೂ ದೈಹಿಕ ಶಿಕ್ಷಕರಾದ ಬಾನು ಪ್ರಕಾಶ್ ಮತ್ತು ಶಶಿಕಲಾ ಕೆ ಕಾರ್ಯಕ್ರಮವನ್ನು ಸಂಯೋಜಿಸಿದರು.




