ಮುಸ್ಲಿಂ ಸಮುದಾಯದ ವಿರುದ್ಧ ವಿವಾದಾತ್ಮಕ ಹೇಳಿಕೆ: ಸಿ.ಟಿ. ರವಿ ವಿರುದ್ಧ FIR ದಾಖಲು
ಚಿಕ್ಕಮಗಳೂರು: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಸ್ಲಿಂ ಸಮುದಾಯದ ವಿರುದ್ಧ ವಿವಾದಾತ್ಮಕ ಹಾಗೂ ನಿಂದನಾತ್ಮಕ ಹೇಳಿಕೆ ನೀಡಿದ ಆರೋಪದಡಿ ಬಿಜೆಪಿ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ವಿರುದ್ಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಎಫ್‌ಐಆರ್ ದಾಖಲಾಗಿದೆ.
ಇತ್ತೀಚೆಗೆ ದೆಹಲಿಯಲ್ಲಿ ನಡೆದ ನೀಟ್ ಪರೀಕ್ಷಾ ಅಕ್ರಮ ಖಂಡಿಸಿ ನಡೆದ ಪ್ರತಿಭಟನೆಗಳನ್ನು ವಿರೋಧಿಸಿ, ಚಿಕ್ಕಮಗಳೂರಿನ ಆಜಾದ್ ಪಾರ್ಕ್ ವೃತ್ತದಲ್ಲಿ ಬಿಜೆಪಿ ಆಯೋಜಿಸಿದ್ದ ‘ಯೂತ್ ಫಾರ್ ನೇಷನ್’ ಕಾರ್ಯಕ್ರಮದಲ್ಲಿ ಸಿ.ಟಿ. ರವಿ ಮಾತನಾಡಿದ್ದರು. ಈ ವೇಳೆ, “ನೀಟ್ ಪರೀಕ್ಷೆಗೂ ಮುಲ್ಲಾಗಳಿಗೂ ಏನು ಸಂಬಂಧ? ಅವರ ಎದೆ ಸೀಳಿದರೆ ಮೂರು ಅಕ್ಷರವೂ ಬರಲ್ಲ, ಅಂತಹವರು ನೀಟ್ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೇಳುವ ಅವರಿಗೂ ನೀಟ್ ಲೀಕ್ ಆಗಿದ್ದಕ್ಕೂ ಏನು ಸಂಬಂಧ?” ಎಂದು ತೀವ್ರ ವಾಗ್ದಾಳಿ ನಡೆಸಿದ್ದರು.
ಇಷ್ಟಕ್ಕೇ ನಿಲ್ಲಿಸದೆ, ಪ್ರತಿಭಟನೆಯಲ್ಲಿ ಭಾಗವಹಿಸಿದವರನ್ನು ‘ತುಕ್ಡೆ ತುಕ್ಡೆ ಗ್ಯಾಂಗ್’ ಎಂದು ಕರೆದ ಅವರು, “ಭಾರತ್ ತೇರೇ ತುಕ್ಡೆ ಹೊಂಗೆ, ಇನ್ ಶಾ ಅಲ್ಲಾ ಎಂದು ಘೋಷಣೆ ಕೂಗುವವರೇ ಈ ಹೋರಾಟದ ಹಿಂದಿದ್ದಾರೆ” ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯು ಮುಸ್ಲಿಂ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಹಾಗೂ ಸಮಾಜದಲ್ಲಿ ದ್ವೇಷ ಮತ್ತು ಅಶಾಂತಿ ಹಬ್ಬಿಸಲು ಯತ್ನಿಸಲಾಗಿದೆ ಎಂದು ಸಮುದಾಯದ ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಿ.ಟಿ. ರವಿ ಅವರ ಈ ದ್ವೇಷಪೂರಿತ ಭಾಷಣವನ್ನು ಖಂಡಿಸಿ ಜಾಮೀಯ ಮಸೀದಿ ಅಧ್ಯಕ್ಷ ಮುದಾಸೀರ್ ಪಾಷಾ ಅವರು ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸಮಾಜದ ಶಾಂತಿ ಕದಡಲು ಯತ್ನಿಸಿದ ಸಿ.ಟಿ. ರವಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಆಗ್ರಹಿಸಿದ್ದು, ಈ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.




