ಮಂಗಳೂರು ಜೈಲ್ ಜಾಮರ್ ತೆರವಿಗೆ ವಕೀಲರ ಪಟ್ಟು: ಸೆಪ್ಟೆಂಬರ್ 18ರ ಸಚಿವ ಸಂಪುಟ ಸಭೆ ವೇಳೆ ಡಿಸಿ ಕಚೇರಿಗೆ ಮುತ್ತಿಗೆ ಎಚ್ಚರಿಕೆ
ಮಂಗಳೂರು: ನಗರದ ಕೊಡಿಯಾಲ್‌ಬೈಲ್‌ನಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಅಳವಡಿಸಲಾಗಿರುವ ಮೊಬೈಲ್ ನೆಟ್‌ವರ್ಕ್ ಜಾಮರ್‌ನಿಂದ ನ್ಯಾಯಾಲಯದ ಕಲಾಪಗಳು ಹಾಗೂ ಸುತ್ತಮುತ್ತಲಿನ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದ್ದು, ಇದನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಸೆಪ್ಟೆಂಬರ್ 18ರಂದು ಪಡೀಲ್‌ನಲ್ಲಿರುವ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಜಗದೀಶ ಶೇಣವ ಎಚ್ಚರಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಾಮರ್‌ನಿಂದಾಗುತ್ತಿರುವ ತೊಂದರೆ ಕುರಿತು ಸರ್ಕಾರದ ಗಮನಕ್ಕೆ ಹಲವು ಬಾರಿ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸೆಪ್ಟೆಂಬರ್ 18ರಂದು ಬೆಳಿಗ್ಗೆ 9 ಗಂಟೆಗೆ ಮಂಗಳೂರಿನ ಕೋರ್ಟ್ ಆವರಣದಲ್ಲಿ ಎಲ್ಲಾ ವಕೀಲರು ಒಟ್ಟುಗೂಡಲಿದ್ದಾರೆ. ಅಲ್ಲಿಂದ ಪಡೀಲ್‌ನಲ್ಲಿರುವ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ನಡೆಸಲಾಗುವುದು. ಈ ಕ್ರಾಂತಿಕಾರಿ ಪ್ರತಿಭಟನೆಯಲ್ಲಿ ಸುಮಾರು 250ಕ್ಕೂ ಹೆಚ್ಚು ವಕೀಲರು ಸಕ್ರಿಯವಾಗಿ ಭಾಗವಹಿಸಲಿದ್ದಾರೆ” ಎಂದು ಶೇಣವ ತಿಳಿಸಿದರು.
ಪ್ರತಿಭಟನೆಯ ತೀವ್ರತೆಯ ಬಗ್ಗೆ ಮಾತನಾಡಿದ ಅವರು, “ಪ್ರತಿಭಟನೆ ನಡೆಸಿದರೆ ನಮ್ಮ ಮೇಲೆ ಪೊಲೀಸರು ಪ್ರಕರಣ ದಾಖಲಿಸುತ್ತಾರೆ ಎಂಬ ಸಂಪೂರ್ಣ ಅರಿವು ನಮಗಿದೆ. ಇದರ ಪರಿಣಾಮ ಗೊತ್ತಿದ್ದೇ ನಾವು ಈ ನಿರ್ಧಾರಕ್ಕೆ ಬಂದಿದ್ದೇವೆ. ಸರ್ಕಾರ ಬೇಕಿದ್ದರೆ ನಮ್ಮ ಮೇಲೆ ಗೋಲಿಬಾರ್ ಮಾಡಲಿ, ಆದರೆ ನಾವು ಮಾತ್ರ ನಮ್ಮ ನಿರ್ಧಾರದಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ” ಎಂದು ಖಡಕ್ ಆಗಿ ಹೇಳಿದರು.
ಅಂದೇ ಮಂಗಳೂರಿನಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದ್ದು, “ಸಚಿವ ಸಂಪುಟ ಸಭೆಗೆ ಕಟ್ಟುನಿಟ್ಟಿನ ಭದ್ರತೆ ನೀಡುವುದು ಸರ್ಕಾರದ ಮೊದಲ ಆದ್ಯತೆಯಾದರೆ, ಜೈಲಿನ ಜಾಮರ್ ತೆರವುಗೊಳಿಸುವುದೇ ನಮ್ಮ ಮೊದಲ ಆದ್ಯತೆ” ಎಂದು ಪ್ರತಿಪಾದಿಸಿದರು.





