ಸುಳ್ಯ: ಫಾತಿಮತ್ ನಿಶಾನ ಸಾವು ಪ್ರಕರಣ: ಮಾವ, ಅತ್ತೆ, ನಾದಿನಿಯ ಬಂಧನ
ಪುತ್ತೂರು: ಕೌಟುಂಬಿಕ ಕಿರುಕುಳದಿಂದಾಗಿ ವಿವಾಹಿತೆಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೃತೆಯ ಮಾವ, ಅತ್ತೆ ಹಾಗೂ ನಾದಿನಿ ವಿರುದ್ಧ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ಸಾರೆಪುಣಿ ನಿವಾಸಿ ಜುಬೈದ್ (43) ಅವರ ಪುತ್ರಿ ಫಾತಿಮತ್ ನಿಶಾನ ಅವರನ್ನು ನಾಲ್ಕು ವರ್ಷಗಳ ಹಿಂದೆ ವಿವಾಹ ಮಾಡಿಕೊಡಲಾಗಿತ್ತು. ಜು.18ರಂದು ರಾತ್ರಿ ಫಾತಿಮತ್ ನಿಶಾನ ಅವರು ತಾಯಿಗೆ ಕರೆ ಮಾಡಿ, ತನ್ನ ಮಾವ, ಅತ್ತೆ, ಹಾಗೂ ನಾದಿನಿ ಅವರು ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದಾರೆ ಎಂದು ತಿಳಿಸಿದ್ದರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ದೂರಿನ ಪ್ರಕಾರ, ತಂದೆ ಮಗಳೊಂದಿಗೆ ಮಾತನಾಡುತ್ತಿದ್ದ ವೇಳೆ ಫೋನ್ ಅನ್ನು ಕಸಿದುಕೊಂಡ ಮಾವ ಅಲವಿ ಅವರು, “ನಿನ್ನ ಮಗಳನ್ನು ಕೊಲ್ಲುತ್ತೇನೆ” ಎಂದು ಬೆದರಿಕೆ ಹಾಕಿದ್ದರೆಂದು ಆರೋಪಿಸಲಾಗಿದೆ.
ಈ ಮಾಹಿತಿ ತಿಳಿದ ಬಳಿಕ ಪಿರ್ಯಾದಿದಾರರು ಮಗಳ ಮನೆಗೆ ತೆರಳಿದಾಗ, ಫಾತಿಮತ್ ನಿಶಾನ ಮೃತಪಟ್ಟಿರುವುದು ಕಂಡುಬಂದಿದೆ. ಕೌಟುಂಬಿಕ ಮನಸ್ತಾಪದ ಹಿನ್ನೆಲೆಯಲ್ಲಿ ತನ್ನ ಮಗಳನ್ನು ಆರೋಪಿಗಳಾದ ಮಾವ ಅಲವಿ, ಅತ್ತೆ ಆಯಿಷ ಹಾಗೂ ನಾದಿನಿ ಫಸೀಲಾ ಕೊಲೆ ಮಾಡಿರುವುದಾಗಿ ಜುಬೈದ್ ಅವರು ನೀಡಿದ ದೂರಿನ ಮೇರೆಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ.100/2026, ಕಲಂ 85, 103(1) ಸಹಪಠಿತ 3(5) ಭಾರತೀಯ ನ್ಯಾಯ ಸಂಹಿತೆ (BNS)-2023ರಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.
ಪತ್ರಿಕಾ ಪ್ರಕಟಣೆ:
ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿಗಳಾದ ಮೃತ ಮಹಿಳೆಯ ಮಾವ ಸಿ ಪಿ ಅಳವಿ (54), ಅತ್ತೆ ಅಯಿಷಾ ಸಿ ಎ ಹಾಗೂ ನಾದಿನಿ ಫಸಿಲಾ ಸಿ ಎ (29) ಎಂಬವರುಗಳನ್ನು ದಿನಾಂಕ:22.07.2026 ರಂದು ಸುಳ್ಯ ಠಾಣಾ ಪೊಲೀಸರು ದಸ್ತಗಿರಿ ಮಾಡಿ ವಿಚಾರಣೆ ನಡೆಸುತ್ತಿದ್ದು, ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.




