October 31, 2026

ಸೌಜನ್ಯ ಪ್ರಕರಣ: ಶಶಿಕುಮಾರ್ ಬದಲಿಗೆ ಚೇತನ್ ಸಿಂಗ್ ರಾಥೋಡ್ ಅವರನ್ನು ಎಸ್‌ಐಟಿ ಮುಖ್ಯಸ್ಥರಾಗಿ ನೇಮಕ

d89aa42a-535e-403e-b48d-7ec83befa385

ಮಂಗಳೂರು: ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರು ತನಿಖೆಗೆ ರಚಿಸಿರುವ ಎಸ್‌ಐಟಿ ಮುಖ್ಯಸ್ಥರನ್ನು ಸರ್ಕಾರ ಬದಲಿಸಿದೆ.

ನೂತನ SIT ಮುಖ್ಯಸ್ಥರಾಗಿ ಸಿಐಡಿ ಐಜಿಪಿ ಚೇತನ್ ಸಿಂಗ್ ರಾಥೋಡ್ ಅವರನ್ನು ಮರು ನೇಮಕ ಮಾಡಲಾಗಿದೆ. ಹಾಸನ ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀನಿಧಿ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ.

ಎಸ್‌ಐಟಿ ಮುಖ್ಯಸ್ಥ ಸ್ಥಾನದಿಂದ ತಮ್ಮನ್ನು ಕೈಬಿಡುವಂತೆ ಐಜಿಪಿ ಶಶಿಕುಮಾರ್‌ ಹಾಗೂ ವೆಂಕಟೇಶ್‌ ಪ್ರಸನ್ನ ಅವರು ಸರ್ಕಾರಕ್ಕೆ ಮನವಿ ಮಾಡಿದ್ದರು. ಕೋರಿಕೆಯನ್ನು ಪರಿಗಣಿಸಿ ಸರ್ಕಾರ ಇಬ್ಬರನ್ನೂ ಎಸ್‌ಐಟಿಯಿಂದ ಕೈಬಿಟ್ಟಿದೆ. ಆ ಸ್ಥಾನಗಳಿಗೆ ರಾಥೋಡ್‌ ಮತ್ತು ಶ್ರೀನಿಧಿ ಅವರನ್ನು ನೇಮಿಸಿದೆ.

2012 ರ ಅಕ್ಟೋಬರ್ 10 ರಂದು ಧರ್ಮಸ್ಥಳದ ನೇತ್ರಾವತಿ ನದಿಯ ಬಳಿಯ ಅರಣ್ಯ ಪ್ರದೇಶದಲ್ಲಿ 17 ವರ್ಷದ ಸೌಜನ್ಯಳ ಶವ ಪತ್ತೆಯಾಗಿದ್ದು, ಆಕೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬಗ್ಗೆ ಹೊಸದಾಗಿ ತನಿಖೆ ನಡೆಸುವಂತೆ ಸೆಪ್ಟೆಂಬರ್ 21 ರಂದು ಸುಪ್ರೀಂ ಕೋರ್ಟ್ ಆದೇಶ ನೀಡಿದ ನಂತರ, ಎಸ್‌ಐಟಿಯನ್ನು ರಚಿಸಲಾಯಿತು. ಕಾಲೇಜಿನಿಂದ ಹಿಂತಿರುಗುವಾಗ ಆಕೆ ಕಾಣೆಯಾದ ಒಂದು ದಿನದ ನಂತರ ಈ ಬಾಲಕಿ ಸಾವನ್ನಪ್ಪಿದ್ದಳು.

ಆಧುನಿಕ ತನಿಖಾ ತಂತ್ರಜ್ಞಾನವನ್ನು ಹೊಂದಿದ ಅನುಭವಿ ತನಿಖಾಧಿಕಾರಿಗಳ ತಂಡವನ್ನು ರಚಿಸಿ ಮೂರು ತಿಂಗಳೊಳಗೆ ಹೊಸ ತನಿಖೆಯನ್ನು ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ತಂಡವು ತನ್ನ ಅಂತಿಮ ತನಿಖಾ ವರದಿಯನ್ನು ಸಮರ್ಥ ನ್ಯಾಯಾಲಯಕ್ಕೆ ಸಲ್ಲಿಸಲಿದೆ.

error: Content is protected !!