ಉಡುಪಿ: ಪ್ರೇಮದ ವಿಚಾರವಾಗಿ ಹಲ್ಲೆ: ಸಂಘ ಪರಿವಾರದ ಕಾರ್ಯಕರ್ತ ಆತ್ಮಹತ್ಯೆ
ಉಡುಪಿ: ಪ್ರೇಮದ ವಿಚಾರವಾಗಿ ಯುವತಿಯ ಕಡೆಯವರು ಹಲ್ಲೆ ನಡೆಸಿದ್ದರಿಂದ ಮನನೊಂದ ಸಂಘ ಪರಿವಾರದ ಕಾರ್ಯಕರ್ತನೋರ್ವ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ.
ಮೃತರನ್ನು ಪೆರ್ಡೂರು ನಾಯರ್ ಕೋಡಿಯ ಪ್ರದೀಪ್ ಪೂಜಾರಿ(27) ಎಂದು ಗುರುತಿಸಲಾಗಿದೆ. ಇವರು ಕಳೆದ ಎಂಟು ವರ್ಷಗಳಿಂದ ಶ್ರಾವ್ಯಾ ಶೆಟ್ಟಿ ಎಂಬಾಕೆಯನ್ನು ಪ್ರೀತಿಸುತ್ತಿದ್ದರೆನ್ನಲಾಗಿದೆ. ಅ.27ರಂದು ರಾತ್ರಿ ಪ್ರದೀಪ್ ತನ್ನ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಶ್ರಾವ್ಯಾ ಶೆಟ್ಟಿಯ ಸಹೋದರರಾದ ಪ್ರಸನ್ನ ಶೆಟ್ಟಿ, ಸುಧೀರ್ ಶೆಟ್ಟಿ, ಶೈಲೇಶ್ ಶೆಟ್ಟಿ, ಸನತ್, ಕೃಷ್ಣ, ಸುಜಯ್ ಮತ್ತು ಇತರರು ಕಾರುಗಳಲ್ಲಿ ಆಗಮಿಸಿ ಬಲವಂತವಾಗಿ ತಮ್ಮ ಮನೆಗೆ ಕರೆದೊಯ್ದಿದ್ದಾರೆ. ಅಲ್ಲಿ ಪ್ರದೀಪ್ ಗೆ ಬೆತ್ತ, ಮರದ ದೊಣ್ಣೆಗಳಿಂದ ಹೊಡೆದು ಗಾಯಗೊಳಿಸಿರುವುದಾಗಿ ದೂರಲಾಗಿದೆ.
ಅ.28ರಂದು ಪ್ರದೀಪ್ ಚಿಕಿತ್ಸೆಗಾಗಿ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದರು. ತನ್ನ ಮೇಲೆ ನಡೆದ ಹಲ್ಲೆಯಿಂದ ತೀವ್ರವಾಗಿ ಮನನೊಂದಿದ್ದ ಪ್ರದೀಪ್, ಅ.30ರಂದು ಸಂಜೆ 5:30ರ ಸುಮಾರಿಗೆ ಜಿಲ್ಲಾಸ್ಪತ್ರೆಯ ಶೌಚಾಲಯದೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
ಪ್ರದೀಪ್ ಸಾವಿಗೆ ಪ್ರಚೋದನೆ ನೀಡಿದ ಆರೋಪಿಗಳಾದ ಶ್ರಾವ್ಯಾ ಶೆಟ್ಟಿ, ಪ್ರಸನ್ನ ಶೆಟ್ಟಿ, ಸುಧೀರ್, ಶೈಲೇಶ್, ಶಶಾಂಕ್, ಕೃಷ್ಣ, ಸುಜಯ, ಸನತ್, ಹೊರ ರಾಜ್ಯದ ಇಬ್ಬರು ಕಾರ್ಮಿಕರ ಮತ್ತು ಇತರರ ವಿರುದ್ಧ ಮೃತರ ಸಹೋದರ ದಿಲೀಪ್ ಕುಮಾರ್ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರದೀಪ್ ಪೂಜಾರಿ ಮದುವೆಯಾಗುವಂತೆ ನಿರಂತರ ಕಿರುಕುಳ ನೀಡುತ್ತಿರುವುದಾಗಿ ಈ ಹಿಂದೆ ಯುವತಿ ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸರು ಆತನನ್ನು ಬಂಧಿಸಿದ್ದರು. ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿದ್ದ ಆತ ಅದೇ ದ್ವೇಷದಲ್ಲಿ 2025ರ ನವೆಂಬರ್ ನಲ್ಲಿ ಆಕೆಯನ್ನು ನಿರ್ಜನ ಪ್ರದೇಶದಲ್ಲಿ ಅತ್ಯಾಚಾರ ಎಸಗಿರುವುದಾಗಿ ದೂರಲಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಉಡುಪಿ ಮಹಿಳಾ ಠಾಣೆಯ ಪೊಲೀಸರು ಪ್ರದೀಪ್ ಪೂಜಾರಿಯನ್ನು ಬಂಧಿಸಿದ್ದರು.




