June 30, 2026

ಮಂಗಳೂರು: ಉದ್ಯಮಿ ಕಾರನ್ನು ಅಡ್ಡಗಟ್ಟಿ ಸಿನಿಮೀಯ ಮಾದರಿಯಲ್ಲಿ ಕಾರು ಸಹಿತ ಚಿನ್ನಾಭರಣ ದೋಚಿ ದರೋಡೆ

0
IMG-20260630-WA0075

ಮಂಗಳೂರು: ಕೇರಳ ಮೂಲದ ಸ್ವರ್ಣೋದ್ಯಮಿಯೊಬ್ಬರ ಕಾರನ್ನು ಅಡ್ಡಗಟ್ಟಿ ಸಿನಿಮೀಯ ಮಾದರಿಯಲ್ಲಿ ಕಾರು ಸಹಿತ ಚಿನ್ನಾಭರಣ ದೋಚಿದ ಘಟನೆ ಸೋಮವಾರ ಬೆಳಗ್ಗಿನ ಜಾವ 2:15ರ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 66ರ ಬೈಕಂಪಾಡಿಯಲ್ಲಿ ನಡೆದಿರುವುದು ವರದಿಯಾಗಿದೆ.

ಮೂಲತಃ ಮಹಾರಾಷ್ಟ್ರ ನಿವಾಸಿ ಕಳೆದ 12 ವರ್ಷಗಳಿಂದ ಕೇರಳದ ಪಯ್ಯನ್ನೂರಿನಲ್ಲಿ ವಾಸವಿರುವ ವಿಕಾಸ್ ಸುಬ್ಬರಾವ್ ಧನವಾಡೆ(44), ಅವರ ಪತ್ನಿ ರೂಪಾಲಿ(38), ಪುತ್ರ ವಿಫುಲ್ (14) ಕಾರಿನಲ್ಲಿದ್ದು, ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಭಾಗವಹಿಸಿ ಕೇರಳದ ಪಯ್ಯನ್ನೂರಿಗೆ ಹಿಂದಿರುಗುತ್ತಿದ್ದ ವೇಳೆ ಈ ಘಟನೆ ನಡೆದಿದೆ.

ಬೆಳಗ್ಗಿನ ಜಾವ 2:15ರ ಸುಮಾರಿಗೆ ಇವರು ಸಂಚರಿಸುತ್ತಿದ್ದ ಕಾರು ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 66ರ ಬೈಕಂಪಾಡಿ ದ್ವಾರಾ ಹೋಟೆಲ್ ಮುಂಭಾಗ ತಲುಪಿದಾಗ ಮೂರು ಕಾರುಗಳು ಅವ ರನ್ನು ಅಡ್ಡಗಟ್ಟಿವೆ. ಆ ಕಾರುಗಳಲ್ಲಿದ್ದ ಸುಮಾರು ಏಳು ಮಂದಿ ಮುಸುಕುಧಾರಿಗಳು ಮಾರಕಾಯುಧ ಗಳೊಂದಿಗೆ ಆಗಮಿಸಿ ವಿಕಾಸ್‌ರಿಗೆ ಹಲ್ಲೆ ನಡೆಸಿದ್ದಾರೆ. ಬಳಿಕ ಅವರನ್ನು ಕಾರಿನಿಂದ ಎಳೆದು ಹೊರಗೆ ಹಾಕಿ ಅವರ ಪತ್ನಿ ಮತ್ತು ಮಗನನ್ನು ಕಾರು ಸಮೇತ ಅಪಹರಿಸಿದ್ದಾರೆ. ರೂಪಾಲಿಯ ಬ್ಯಾಗ್‌ನಲ್ಲಿದ್ದ 180 ಗ್ರಾಂ ಚಿನ್ನಾಭರಣ, ಮೊಬೈಲ್ ಫೋನ್‌ನ್ನು ಕಸಿದ ದರೋಡೆಕೋರರು, ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಬೀಚ್ ರಸ್ತೆ ಬಳಿಯ ಹೆದ್ದಾರಿ ಯಲ್ಲಿ ತಾಯಿ-ಮಗನನ್ನು ತೊರೆದು ಕಾರು ಸಮೇತ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಮಾಹಿತಿ ತಿಳಿದಾಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು, ಉದ್ಯಮಿ ವಿಕಾಸ್, ಅವರ ಪತ್ನಿ ಮತ್ತು ಮಗನನ್ನು ರಕ್ಷಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ಘಟನೆಯ ಬಗ್ಗೆ ವಿಕಾಸ್ ನೀಡಿರುವ ದೂರಿನಂತೆ ಪಣಂಬೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!