ಮಂಗಳೂರು: ಮಹಿಳೆಯರ ಕುತ್ತಿಗೆಯಿಂದ ಸರ ಕಳವು ಪ್ರಕರಣ: ಆರೋಪಿಯ ಬಂಧನ
ಮಂಗಳೂರು: ಸುರತ್ಕಲ್ ಠಾಣಾ ವ್ಯಾಪ್ತಿಯ ಚೊಕ್ಕಬೆಟ್ಟು ಅಸುಪಾಸಿನ ನಲ್ಲಿ ಜೂನ್ ೨೬, ೨೭ ರಂದು ಮುಂಜಾನೆ ನಡೆದ ಮಹಿಳೆಯರ ಸರ ಸುಲಿಗೆ ಪ್ರಕರಣವನ್ನು ಭೇದಿಸಿದ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿ ಮೊಹಮ್ಮದ್ ಅಬ್ದುಲ್ ಜಾಫರ್ ಎಂದು ಗುರುತಿಸಲಾಗಿದೆ. ಜೂನ್ 26 ರಂದು ಮುಂಜಾನೆ 2 ಗಂಟೆ ವೇಳೆ ಸುರತ್ಕಲ್ ಠಾಣಾ ವ್ಯಾಪ್ತಿಯ ಚೊಕ್ಕಬೆಟ್ಟು ಅಜಾದ್ ನಗರದ 2 ನೇ ಬ್ಲಾಕ್ ನಲ್ಲಿರುವ ಜಾಹೀದ್ ಎಂಬವರು ತನ್ನ ಮನೆಯ ಬೆಡ್ ರೂಮ್ ನಲ್ಲಿ ಮಲಗಿದ್ದ ವೇಳೆ ಕಿಟಿಕಿ ಮೂಲಕ ಕೈ ಹಾಕಿ ಆಕೆಯ ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿ ಸರವನ್ನು ಸುಲಿಗೆ ಮಾಡಲು ಯತ್ನಿಸಿದ್ದಾನೆ.
ಈ ವೇಳೆ ಕರಿಮಣಿ ಸರ ತುಂಡಾಗಿದ್ದು, ಸುಮಾರು 20,000 ಮೌಲ್ಯದ ಕರಿಮಣಿ ಸರದ ತುಂಡನ್ನು ಆರೋಪಿ ಕೊಂಡು ಹೋಗಿದ್ದು, ಉಳಿದ ಕರಿಮಣಿ ಸರ ಮಹಿಳೆ ಬಳಿ ಉಳಿದಿದ್ದು, ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಮೊ.ನಂ. 78/2026 ಕಲಂ 304 ಬಿ.ಎನ್.ಎಸ್ ರಂತೆ ಪ್ರಕರಣ ದಾಖಲಾಗಿತ್ತು.
ಇದೇ ರೀತಿ ಜೂನ್ 27ರಂದು ಬೆಳಿಗ್ಗೆ 05 ಗಂಟೆಯಿಂದ 05-15 ಗಂಟೆ ನಡುವೆ ಸುರತ್ಕಲ್ ಠಾಣಾ ವ್ಯಾಪ್ತಿಯ ಚೊಕ್ಕಬೆಟ್ಟು 8ನೇ ಬ್ಲಾಕ್ ನಲ್ಲಿರುವ ಫಯಾಜ್ ಎಂಬವರು ಮುಂಜಾನೆ 5ಗಂಟೆಗೆ ಮಸೀದಿಗೆ ಪ್ರಾರ್ಥನೆಗೆಂದು ಹೋದಾಗ ತನ್ನ ಮನೆಯ ಬಾಗಿಲನ್ನು ಮುಚ್ಚಿಹೋಗಿದ್ದರು. ಅದೇ ವೇಳೆಗೆ ಅಪರಿಚಿತ ವ್ಯಕ್ತಿಯು ಬಾಗಿಲನ್ನು ತೆರೆದು ಮನೆಯ ಒಳಗಡೆ ಪ್ರವೇಶಿಸಿ ಬೆಡ್ ರೂಮ್ ನಲ್ಲಿ ಮಲಗಿದ್ದ ಅಪ್ರೀನಾ ರವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಳ್ಳಲು ಯತ್ನಿಸಿದಾಗ ಚಿನ್ನದ ಸರ ತುಂಡಾಗಿದ್ದು, ಸುಮಾರು 1,00,000ಮೌಲ್ಯದ ಚಿನ್ನದ ಸರವನ್ನು ಆರೋಪಿ ಕೊಂಡು ಹೋಗಿದ್ದ. ಚಿನ್ನದ ಸಣ್ಣ ತುಂಡು ಹಾಗೂ ಪೆಂಡೆಂಟ್ ಮಹಿಳೆ ಬಳಿ ಇದ್ದು, ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಮೊ.ನಂ. 79/2026 ಕಲಂ 305, 304 ಬಿ.ಎನ್.ಎಸ್ ರಂತೆ ಪ್ರಕರಣ ದಾಖಲಾಗಿತ್ತು.
ಎರಡೂ ಸುಲಿಗೆ ಪ್ರಕರಣಗಳನ್ನು ಭೇದಿಸಿ ಆರೋಪಿಯ ಮಾಹಿತಿ ಸಂಗ್ರಹಿಸಿ ಆರೋಪಿತ ಮೊಹಮ್ಮದ್ ಅಬ್ದುಲ್ ಜಾಫರ್ (28) ಎಂಬಾತನ್ನು ಜೂನ್ 29 ರಂದು ಮಂಗಳೂರು ನಗರದ ಸ್ಟೇಟ್ ಬ್ಯಾಂಕ್ ನ ಬಳಿಯಲ್ಲಿ ಚಿನ್ನಾಭರಣಗಳ ಸಹಿತವಾಗಿ ದಸ್ತಗಿರಿ ಮಾಡಿದ್ದಾರೆ. ಆರೋಪಿತನಿಂದ ಎರಡೂ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಚಿನ್ನಾಭರಣಗಳನ್ನು ಯಥಾ ಸ್ಥಿತಿಯಲ್ಲಿ ಸ್ವಾಧೀನಪಡಿಸಿಕೊಳ್ಳಲಾಗಿದೆ.
ಆರೋಪಿ ಮೊಹಮ್ಮದ್ ಅಬ್ದುಲ್ ಜಾಫರ್ ನ ವಿರುದ್ಧ ಈ ಹಿಂದೆ ಸುರತ್ಕಲ್ ಪೊಲೀಸ್ ಠಾಣೆ ಮೊ.ನಂ. 36/2025 ಕಲಂ: 326 (ಎಫ್), 324(5), 352, 351(3), 3(5) ಬಿ.ಎನ್.ಎಸ್ ಮತ್ತು ಉರ್ವಾ ಪೊಲೀಸ್ ಠಾಣೆ ಮೊ.ನಂ. 123/2018 ಕಲಂ: 341, 323, 504, 506 ಐಪಿಸಿ ಅಡಿ ಪ್ರಕರಣ ದಾಖಲಾಗಿದೆ.




