ಸಮಾಧಿ ಅಗೆದು ಹೆಣದ ಮೇಲಿದ್ದ ಚಿನ್ನದ ಸರ ದೋಚಿದ ಕಳ್ಳರು
ಕೊಯಮತ್ತೂರು: ಸಮಾಧಿ ಅಗೆದು ಹೆಣದ ಮೇಲಿದ್ದ ಚಿನ್ನದ ಸರವನ್ನು ಕಳ್ಳರು ದೋಚಿರುವ ಆಘಾತಕಾರಿ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ.
ಮೀನು ಮಾರಾಟಗಾರರೊಬ್ಬರು ನಿಧನರಾಗಿದ್ದ ವೇಳೆ ಅವರ ಕೊರಳಲ್ಲಿದ್ದ 24 ಗ್ರಾಂ ಚಿನ್ನದ ಸರವನ್ನು ತೆಗೆಯುವುದು ಬೇಡವೆಂದು ಕುಟುಂಬದವರು ಶವದ ಜತೆ ಮಣ್ಣು ಮಾಡಿದ್ದರು. ಈ ಮಾಹಿತಿ ತಿಳಿದಿದ್ದ ಕಳ್ಳರು ರಾತ್ರಿ ಸಮಾಧಿಯನ್ನು ಅಗೆದು ಚಿನ್ನದ ಸರವನ್ನು ದೋಚಿ ಪರಾರಿಯಾಗಿದ್ದಾರೆ.
ಮೃತರ ಮಗ ಮತ್ತು ಸಂಬಂಧಿಕರು ಜೂನ್ 22ರಂದು 16 ನೇ ದಿನದ ಪುಣ್ಯತಿಥಿ ಕಾರ್ಯಗಳನ್ನು ಮಾಡಲು ಸಮಾಧಿ ಜಾಗಕ್ಕೆ ಹೋಗಿದ್ದರು. ಈ ವೇಳೆ ಸಮಾಧಿಯ ಸುತ್ತಲಿನ ಮಣ್ಣು ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡು, ಹೊಸದಾಗಿ ಅಗೆದಂತೆ ಕಾಣಿಸಿದೆ. ಇದರಿಂದ ಅನುಮಾನಗೊಂಡು ತನಿಖೆ ನಡೆಸಿದಾಗ ಕಳ್ಳತನ ಕೃತ್ಯ ಬೆಳಕಿಗೆ ಬಂದಿದೆ.
ಕುಟುಂಬಸ್ಥರು ಸ್ಮಶಾನದ ಉಸ್ತುವಾರಿ ನೋಡಿಕೊಳ್ಳುವನನ್ನು ತೀವ್ರವಾಗಿ ಪ್ರಶ್ನಿಸಿದಾಗ ಸತ್ಯ ಹೊರಬಿದ್ದಿದೆ. ತಡರಾತ್ರಿ ಇಬ್ಬರು ಸ್ಥಳೀಯ ವ್ಯಕ್ತಿಗಳು ಸ್ಮಶಾನಕ್ಕೆ ಅಕ್ರಮವಾಗಿ ನುಗ್ಗಿ, ಮೃತರ ಸಮಾಧಿಯನ್ನು ಅಗೆದು ಶವದ ಮೇಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಓಡಿಹೋಗಿರುವುದಾಗಿ ಆತ ತಿಳಿಸಿದ್ದಾನೆ.
ಸದ್ಯ ಮೃತರ ಮಗ ನೀಡಿದ ದೂರಿನ ಮೇರೆಗೆ ಪೀಲಮೇಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆ ಬೆಳಕಿಗೆ ಬಂದಾಗಿನಿಂದ ಸ್ಮಶಾನದ ಉಸ್ತುವಾರಿ ಸೇರಿದಂತೆ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಪೊಲೀಸರು ಆರೋಪಿಗಳಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.




