June 17, 2026

ಬಂಟ್ವಾಳ: ತೀವ್ರ ಜ್ವರದಿಂದ ಬಳಲುತ್ತಿದ್ದ ಬಾಲಕಿ ಮೃತ್ಯು

0
image_editor_output_image2115524802-1781681835132.jpg

ಬಂಟ್ವಾಳ: ಕಳೆದ ಒಂದೆರಡು ದಿನಗಳಿಂದ ತೀವ್ರ ಜ್ವರ ಹಾಗೂ ಅನಾರೋಗ್ಯದಿಂದ ಬಳಲುತ್ತಿದ್ದ ಇಲ್ಲಿನ ಎಸ್.ವಿ.ಎಸ್. ದೇವಳ ಆಂಗ್ಲ ಮಾಧ್ಯಮ ಶಾಲೆಯ ಯು.ಕೆ.ಜಿ. ವಿದ್ಯಾರ್ಥಿನಿ, ಅಲ್ಲಿಪಾದೆ ಅನೇಜ ನಿವಾಸಿ ಹರ್ನಿಕಾ (5) ಚಿಕಿತ್ಸೆ ಫಲಕಾರಿಯಾಗದೆ ಜೂನ್ 16ರ ಮಂಗಳವಾರ ಮುಂಜಾನೆ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾಳೆ. ಮೃತ ಬಾಲಕಿ ಹರ್ನಿಕಾ ಪ್ರಜ್ವಲ್ ಹಾಗೂ ಛಾಯಾ ದಂಪತಿಯ ಏಕೈಕ ಪುತ್ರಿಯಾಗಿದ್ದಾಳೆ.

ಕಳೆದ ಶುಕ್ರವಾರದವರೆಗೂ ಎಂದಿನಂತೆ ಶಾಲೆಗೆ ಹೋಗಿದ್ದ ಹರ್ನಿಕಾ, ಅತ್ಯಂತ ಸಕ್ರಿಯಳಾಗಿ ಚಟುವಟಿಕೆಗಳಲ್ಲಿ ಭಾಗವಹಿಸಿದ್ದಳು. ಆದರೆ ಶನಿವಾರದಂದು ಬಾಲಕಿಗೆ ತೀವ್ರ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವೈದ್ಯರ ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ ದುರದೃಷ್ಟವಶಾತ್ ಚಿಕಿತ್ಸೆಗೆ ಸ್ಪಂದಿಸದ ಬಾಲಕಿ ಮಂಗಳವಾರ ಬೆಳಿಗ್ಗೆ ಕೊನೆಯುಸಿರೆಳೆದಿದ್ದಾಳೆ.
ಪ್ರಸ್ತುತ ದಂಪತಿ ಬಂಟ್ವಾಳದಲ್ಲಿ ವಾಸಿಸುತ್ತಿದ್ದು, ಬಾಲಕಿ ಅಲ್ಲಿಪಾದೆಯಲ್ಲಿರುವ ತನ್ನ ಅಜ್ಜಿ ಮನೆಯಿಂದ ಶಾಲೆಗೆ ಹೋಗಿ ಬರುತ್ತಿದ್ದಳು. ಕಳೆದ ಜನವರಿ ತಿಂಗಳಲ್ಲಿ ಅಜ್ಜಿ ಮನೆಯಿಂದ ಆಟೋದಲ್ಲಿ ಶಾಲೆಗೆ ಬರುತ್ತಿದ್ದ ವೇಳೆ ಆಟೋ ಪಲ್ಟಿಯಾಗಿ ಬಾಲಕಿ ಗಾಯಗೊಂಡಿದ್ದಳು.

ತದನಂತರ ಚಿಕಿತ್ಸೆ ಪಡೆದು ಸಂಪೂರ್ಣ ಗುಣಮುಖಳಾಗಿದ್ದಳು. ಆದರೆ ಈಗ ಜ್ವರದ ರೂಪದಲ್ಲಿ ಬಂದ ವಿಧಿ, ಆಕೆಯ ಮುಗ್ಧ ಜೀವವನ್ನು ಬಲಿಪಡೆದಿದೆ.
ಒಬ್ಬಳೇ ಮಗಳನ್ನು ಕಳೆದುಕೊಂಡು ಕಣ್ಣೀರಿನಲ್ಲಿ ಮುಳುಗಿರುವ ಪೋಷಕರಿಗೆ ಮಾಜಿ ಸಚಿವ ಬಿ. ರಮಾನಾಥ ರೈ ಸೇರಿದಂತೆ ಹಲವು ಗಣ್ಯರು ಭೇಟಿ ನೀಡಿ ಸಾಂತ್ವನ ಹೇಳಿ, ಸಂತಾಪ ಸೂಚಿಸಿದ್ದಾರೆ. ಮೃತ ಬಾಲಕಿಯ ಗೌರವಾರ್ಥ ಬಂಟ್ವಾಳ ಎಸ್.ವಿ.ಎಸ್. ದೇವಳ ಆಂಗ್ಲ ಮಾಧ್ಯಮ ಶಾಲೆಗೆ ಮಂಗಳವಾರ ರಜೆ ಘೋಷಿಸಲಾಗಿತ್ತು.

Leave a Reply

Your email address will not be published. Required fields are marked *

You may have missed

error: Content is protected !!