ಟಿಎಂಸಿ 20 ಸಂಸದರು ಬಿಜೆಪಿ ಗುಂಪಿನ ಸೇರ್ಪಡೆ ಜನಾದೇಶಕ್ಕೆ ದ್ರೋಹ: ಅಬ್ದುಲ್ ಮಜೀದ್ ಮಂಗಳೂರಿನಲ್ಲಿ ಎಸ್‌ಡಿಪಿಐ ಜಿಲ್ಲಾ ಪ್ರತಿನಿಧಿ ಸಭೆ
ಮಂಗಳೂರು: ಟಿಎಂಸಿಯ 20 ಲೋಕಸಭಾ ಸದಸ್ಯರು ಮತದಾರರು ನೀಡಿದ ಜನಾದೇಶಕ್ಕೆ ವಿರುದ್ಧವಾಗಿ ಬಿಜೆಪಿ ನೇತೃತ್ವದ ಎನ್‌ಡಿಎ ಪಾಳಯವನ್ನು ಸೇರಿರುವುದು ಜನತಂತ್ರದ ಮೌಲ್ಯಗಳಿಗೆ ವಿರುದ್ಧವಾದ ನಡೆ ಹಾಗೂ ಮತದಾರರ ವಿಶ್ವಾಸಕ್ಕೆ ಮಾಡಿದ ದ್ರೋಹವಾಗಿದೆ ಎಂದು ಎಸ್‌ಡಿಪಿಐ ಕರ್ನಾಟಕ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಹೇಳಿದ್ದಾರೆ. ಅವರು ಮಂಗಳೂರಿನಲ್ಲಿ ನಡೆದ ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ಪ್ರತಿನಿಧಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ದೇಶದ ಪ್ರಸ್ತುತ ರಾಜಕೀಯ ಬೆಳವಣಿಗೆಗಳು, ಪ್ರಜಾಪ್ರಭುತ್ವದ ಸವಾಲುಗಳು ಹಾಗೂ ಕರ್ನಾಟಕದ ರಾಜಕೀಯ ಪರಿಸ್ಥಿತಿಗಳ ಕುರಿತು ಅವರು ಬೆಳಕು ಚೆಲ್ಲಿದರು. ಜನರು ಒಂದು ಪಕ್ಷದ ಸಿದ್ಧಾಂತ, ನೀತಿ ಹಾಗೂ ರಾಜಕೀಯ ನಿಲುವುಗಳನ್ನು ಆಧರಿಸಿ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಾರೆ. ಆದ್ದರಿಂದ ಚುನಾವಣೆಯಲ್ಲಿ ಪಡೆದ ಜನಾದೇಶವನ್ನು ಕಡೆಗಣಿಸಿ ಬೇರೆ ರಾಜಕೀಯ ಪಾಳಯವನ್ನು ಸೇರುವುದು ನೈತಿಕವಾಗಿ ಹಾಗೂ ರಾಜಕೀಯವಾಗಿ ಸಮರ್ಥನೀಯವಲ್ಲ. ಅಂತಹ ಜನಪ್ರತಿನಿಧಿಗಳು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ಹೊಸ ರಾಜಕೀಯ ನಿಲುವಿನೊಂದಿಗೆ ಮತ್ತೆ ಜನರ ಮುಂದೆ ಹೋಗಬೇಕು ಎಂದು ಅವರು ಆಗ್ರಹಿಸಿದರು.
ಮತದಾರರ ಪಟ್ಟಿಗೆ ಸಂಬಂಧಿಸಿದ SIR ಪ್ರಕ್ರಿಯೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪಕ್ಷದ ನಾಯಕರು ಹೆಚ್ಚು ಗಮನಹರಿಸಬೇಕು, ಯಾವುದೇ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಕಾರ್ಯಕರ್ತರು ಮಾಹಿತಿ ಮತ್ತು ಸಹಕಾರ ನೀಡಬೇಕು ಎಂದು ಕರೆ ನೀಡಿದರು. ದೇಶದ ಪ್ರಸ್ತುತ ರಾಜಕೀಯ ಪರಿಸ್ಥಿತಿಯನ್ನು ಉಲ್ಲೇಖಿಸಿದ ಅವರು, ಜನರ ಸಮಸ್ಯೆಗಳಿಗೆ ಸ್ಪಂದಿಸಿ ನ್ಯಾಯದ ಪರವಾಗಿ ನಿಲ್ಲುವ ಮೂಲಕ ಎಸ್‌ಡಿಪಿಐ ಹೆಚ್ಚಿನ ಜನಬೆಂಬಲ ಗಳಿಸಬೇಕು. ಜನರ ಸಮಸ್ಯೆಗಳಿಗೆ ಮಧ್ಯಪ್ರವೇಶಿಸಿ ನ್ಯಾಯದ ವಕ್ತಾರರಾಗಬೇಕು ಎಂದು ಕರೆ ನೀಡಿದರು. ಜೊತೆಗೆ ಪುತ್ತೂರನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಘೋಷಿಸುವುದು ಹಾಗೂ ಬ್ರಹ್ಮರಕೊಟ್ಲು ಟೋಲ್‌ಗೇಟ್ ವಿರುದ್ಧದ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ಅಗತ್ಯವಿದೆ ಎಂದರು.




